ಮಲಯಾಳಂ ಫಿಲ್ಮ್ ಇಂಡಸ್ಟ್ರೀಯ ಕಾಮ ಪುರಾಣ ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ದಿನಕ್ಕೊಬ್ಬ ನಟಿಯರು, ಕಲಾವಿದೆಯರು ತಮಗೆ ಆದಂತಹ ಕರಾಳ ಅನುಭವವನ್ನು ಬಿಚ್ಚಿಡುತ್ತಿದ್ದಾರೆ. ಕುತೂಹಲದ ಸಂಗತಿ ಅಂದರೆ, ಇಲ್ಲೊಬ್ಬ ನಿರ್ದೇಶಕ, ಯುವಕರನ್ನೂ ಬಿಟ್ಟಿಲ್ವಂತೆ..
ಮಲಯಾಳಂ ಫಿಲ್ಮ್ ಇಂಡಸ್ಟ್ರೀಯಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಹಗರಣಕ್ಕೆ ಇದೀಗ ಮತ್ತೊಂದು ಸ್ಪೋಟಕ ತಿರುವು ಸಿಕ್ಕಿದೆ. ಇತ್ತೀಚಿಗಷ್ಟೇ ನಿವೃತ್ತ ಜಡ್ಜ್ ಹೇಮಾ ನೇತೃತ್ವದ ಸಮಿತಿ ಮಾಲಿವುಡ್ನಲ್ಲೀನ ಲೈಂಗಿಕ ಕಿರುಕುಳದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದಾದ ಬೆನ್ನಲ್ಲೇ ತಾ ಮುಂದು ನಾ ಮುಂದು ಎಂದು ನಟಿಯರು ತಮಗಾದ ಕರಾಳ ಅನುಭವವನ್ನ ಹಂಚಿಕೊಂಡಿದ್ರು. ಇದಾದ ಬಳಿಕ ನಟಿಯೊಬ್ಬರನ್ನು ಅತ್ಯಾಚಾರ ಮಾಡಿರುವ ಆರೋಪದಡಿ ನಟ ಮುಕೇಶ್ ಸೇರಿದಂತೆ 8 ಮಂದಿ ಮೇಲೆ ಕೇಸ್ ಫೈಲ್ ಆಗಿತ್ತು.
ವಿಶೇಷ ಅಂದ್ರೆ ಮೊನ್ನೆಯಷ್ಟೇ ಮಹಿಳಾ ನಟಿಯರ ಮೇಲಿನ ಲೈಂಗಿಕ ಕಿರುಕುಳ ಆರೋಪದಡಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಲಯಾಳಂ ಸಿನಿಮಾ ರಂಗದ ಖ್ಯಾತ ನಿರ್ದೇಶಕ ರಂಜಿತ್‌ಕುಮಾರ್, ಸಿನೆಮಾ ಅಕಾಡೆಮಿಗೆ ರಾಜೀನಾಮೆ ಸಹ ನೀಡಿದ್ರು. ಇದೀಗ ನಿರ್ದೇಶಕ ರಂಜಿತ್ ಕುಮಾರ್ ಮೇಲೆ ಯುವ ನಟನೊಬ್ಬ ಗಂಭೀರ ಆರೋಪ ಮಾಡಿದ್ದಾರೆ.
ಅಚ್ಚರಿಯ ವಿಷ್ಯ ಅಂದ್ರೆ ಇದೀಗ ನಿರ್ದೇಶಕ ರಂಜಿತ್ ಕುಮಾರ್ ಮೇಲೆ ಕೇರಳದ ಕೋಜಿಕೋಡ್ನ ಯುವ ಕಲಾವಿದನೊಬ್ಬ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾನೆ. 2012ರಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟಿ ಅಭಿನಯಿಸಿದ ,’ಭವುತ್ತಿಯುಡೆ ನಮಥಿಲ್’ ಸಿನಿಮಾದ ಶೂಟಿಂಗ್ ವೇಳೆ ಯುವಕನಿಗೆ ರಂಜಿತ್ ಪರಿಚಯವಾಗಿದ್ರಂತೆ. ಆನಂತರ ಸಣ್ಣ ಪೇಪರ್ ಪೀಸ್ನಲ್ಲಿ ಫೋನ್ ನಂಬರ್ ಬರೆದು ಕೊಟ್ಟಿದ್ದಾರಂತೆ.
ಇದಾದ ಬಳಿಕ ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್ಗೆ ನಿರ್ದೇಶಕ ಯುವಕ ಕರೆಸಿಕೊಂಡಿದ್ದಾರೆ. ನೀನು ಹೇಗೆ ಕಾಣುತ್ತಿಯಾಂತ ನಾನು ನೋಡಬೇಕು. ನಿನ್ನ ಕಣ್ಣುಗಳು ಬಹಳ ಸುಂದರವಾಗಿದೆ ಐಬ್ರೋ ಮಾಡಿಸು ಅಂತಾ ಹೇಳಿ, ಯುವಕನನ್ನ ಬೆತ್ತಲಾಗುವಂತೆ ಒತ್ತಾಯಿಸಿದ್ದಾನಂತೆ. ಇಷ್ಟೆಲ್ಲಾ ಮಾಡಿದರೂ ತೃಪ್ತಿಯಾಗದ ರಂಜಿತ್ ಅದೇ ಸ್ಥಿತಿಯಲ್ಲಿ ಯುವಕನ ಫೋಟೋವನ್ನು ತೆಗೆದು ನಟಿ ರೇವತಿಗೆ ಕಳುಹಿಸಿದ್ದಾನೆ. ಬಳಿಕ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಯುವಕ ಆರೋಪಿಸಿದ್ದಾನೆ.
ನಿವೃತ್ತಿ ಜಡ್ಜ್ ಹೇಮಾ ಸಮಿತಿ ಮಲೆಯಾಳಂ ಸಿನಿಮಾ ರಂಗದ ಕರಾಳ ಮುಖವನ್ನು ಬಿಚ್ಚಿಡುತ್ತಿದ್ದಂತೆ, ಮೊದಲ ತಲೆದಂಡವಾಗಿದ್ದೇ ನಿರ್ದೇಶಕ ರಂಜಿತ್. ಆತನ ವಿರುದ್ಧ ಈ ಹಿಂದೆ ಬೆಂಗಾಲಿ ನಟಿ ಶ್ರೀಲೇಖಾ ಮಿತ್ರಾ ಕೂಡ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ರು .ಸದ್ಯ ಮಲಯಾಳಂ ಫಿಲ್ಮ್ ಇಂಡಸ್ಟ್ರೀಯ ಕರಾಳ ಮುಖ ಅನಾವರಣಗೊಂಡಿದೆ. ಇನ್ನು ಇಂತಹ ಆರೋಪದಡಿ ಯಾವ ನಟ, ನಿರ್ದೇಶಕನ ಹೆಸರು ಹೊರಬೀಳುತ್ತೆ ಎಂಬುದನ್ನು ಕಾದು ನೋಡ್ಬೇಕಿದೆ.