ನಿಷೇಧಿತ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್, ಭಾರತದ ಮೇಲೆ ಭಾರೀ ದಾಳಿ ನಡೆಸುವ ಬೆದರಿಕೆ ಹಾಕಿರುವ ಆಡಿಯೋವೊಂದು ಇದೀಗ ಬಹಿರಂಗವಾಗಿದೆ. ಆಡಿಯೋದಲ್ಲಿ, ಸಾವಿರಕ್ಕೂ ಹೆಚ್ಚು ಆತ್ಮಾಹುತಿ ದಾಳಿಕೋರರು ಭಾರತದ ಮೇಲೆ ದಾಳಿ ಮಾಡಲು ಸಜ್ಜಾಗಿದ್ದಾರೆ ಎಂದು ಆತ ಬೆದರಿಕೆ ಹಾಕಿದ್ದಾನೆ.
ಒಂದಲ್ಲ, ಎರಡಲ್ಲ, ಸಾವಿರಕ್ಕೂ ಹೆಚ್ಚು ಆತ್ಮಾಹುತಿ ದಾಳಿಕೋರರು ಭಾರತದ ಮೇಲೆ ದಾಳಿ ಮಾಡಲು ಸಜ್ಜಾಗಿದ್ದಾರೆ. ನಮ್ಮ ಬಳಿ ಇರುವ ದಾಳಿಕೋರರ ಸಂಖ್ಯೆಯನ್ನು ಬಹಿರಂಗಪಡಿಸಿದರೆ ಇಡೀ ಜಗತ್ತೇ ಬೆಚ್ಚಿಬೀಳುತ್ತದೆ. ಅವರು ಭಾರತದೊಳಗೆ ನುಸುಳಲು ಕಾತುರದಿಂದ ಕಾಯುತ್ತಿದ್ದಾರೆ. ಯಾವುದೇ ಕ್ಷಣದಲ್ಲಾದರೂ ದಾಳಿ ನಡೆಸಬಹುದು ಎಂದು ಹೇಳಿದ್ದಾನೆ.
ಈ ಆಡಿಯೋ ಬಹಿರಂಗವಾಗಿರುವುದು, ಪಹಲ್ಲಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ನಂತರ, ಪಾಕಿಸ್ತಾನದಲ್ಲಿರುವ JeM ನ ಒಂಬತ್ತು ಉಗ್ರ ನೆಲೆಗಳನ್ನ ಧ್ವಂಸಗೊಳಿಸಿದ್ದರಿಂದ ಸುಮಾರು ಎಂಟು ತಿಂಗಳ ಬಳಿಕ ಎಂಬುದು ಗಮನಾರ್ಹ ಅಂಶವಾಗಿದೆ.
ಭಾರತೀಯ ಸೇನೆಯ ಈ ಕಾರ್ಯಾಚರಣೆಯಿಂದ JeM ಗೆ ಭಾರೀ ಹಾನಿಯಾಗಿದ್ದು, ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಈ ಬೆದರಿಕೆ ಹೊರಡಿಸಿರುವ ಸಾಧ್ಯತೆ ಇದೆ ಎಂದು ಭದ್ರತಾ ವಲಯಗಳು ಅಂದಾಜಿಸುತ್ತಿವೆ.
ಆದರೆ, ಈ ಆಡಿಯೋ ರೆಕಾರ್ಡಿಂಗ್ ಯಾವ ದಿನಾಂಕಕ್ಕೆ ಸೇರಿದ್ದು ಮತ್ತು ಅದರ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ದೃಢಪಡಿಸಲು ಸಾಧ್ಯವಾಗಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಈ ಹಿನ್ನೆಲೆಯಲ್ಲಿ, ಭಾರತೀಯ ಭದ್ರತಾ ಸಂಸ್ಥೆಗಳು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿವೆ.
ವರದಿ : ಲಾವಣ್ಯ ಅನಿಗೋಳ




