Saturday, December 28, 2024

Latest Posts

ಚೀಟಿ ಹೆಸರಿನಲ್ಲಿ ಐದು ಕೋಟಿಗೂ ಹೆಚ್ಚು ವಂಚಿಸಿ ಸೇಟು ಪರಾರಿ

- Advertisement -

ಎಲ್ಲಿಯವರೆಗೂ ಮೋಸ ಹೋಗುವವರು ಇರುತ್ತಾರೋ ಅಲ್ಲಿಯವರೆಗೂ ಮೋಸ ಮಾಡುವವರು ಇರುತ್ತಾರೆ. ಇಲ್ಲೊಬ್ಬ ಸೇಟು ವರಮಹಾಲಕ್ಷ್ಮೀ ಹಬ್ಬದ ನೆಪದಲ್ಲಿ ಚೀಟಿ ಕಟ್ಟಿಸಿಕೊಂಡು ಐದು ಕೋಟಿಗೂ ಹೆಚ್ಚು ಹಣವನ್ನ ವಂಚಿಸಿ ಪರಾರಿಯಾಗಿರುವ ಘಟನೆ ಆನೇಕಲ್‌ ತಾಲೂಕಿನ ಕಾಚನಾಯಕನ ಹಳ್ಳಿಯಲ್ಲಿ ನಡೆದಿದೆ. ಹಬ್ಬದ ಸಂಭ್ರಮಕ್ಕೆಂದು ಚೀಟಿ ಹಾಕಿ ಸಂತಸದಲ್ಲಿದ್ದ ಗ್ರಾಮಸ್ಥರಿಗೆ ಈಗ ದಿಕ್ಕೇ ತೋಚದಂತಾಗಿದೆ. ಇತ್ತ ಹಬ್ಬದ ಸಂಭ್ರಮವೂ ಇಲ್ಲ, ಚಿನ್ನವೂ ಇಲ್ಲ, ಅತ್ತ ನೋಡಿದರೆ ಹಣ ಕಟ್ಟಿಸಿಕೊಂಡ ಪುಣ್ಯಾತ್ಮ ಮೊದಲೇ ಇಲ್ಲ. ಏನು ಮಾಡಬೇಕೆಂಬುದು ತಿಳಿಯದ ಸ್ಥಿತಿಯಲ್ಲಿದ್ದಾರೆ.

 

ಚಿನ್ನ ಕೊಡುತ್ತೇನೆಂದು ಹಣ ಕಟ್ಟಿಸಿಕೊಂಡು ಜನರಿಗೆ ಮೂರು ನಾಮ ಹಾಕಿ ಸೇಟು ಎಸ್ಕೇಪ್‌ ಆಗಿದ್ದಾನೆ. ಮುನಾರಾಮ್ ಎಂಬಾತ ರಾಜಸ್ಥಾನ ಮೂಲದವನಾಗಿದ್ದು, ಆನಂದ್ ಜ್ಯುವೆಲರ್ಸ್ ಅಂಡ್ ಕೇಸರ್ ಬ್ಯಾಂಕರ್ಸ್‌ನ ಮಾಲೀಕ. ಹತ್ತು ವರ್ಷಕ್ಕೂ ಹೆಚ್ಚು ದಿನದಿಂದ ಇಲ್ಲೇ ವಾಸವಿದ್ದ ಈತ 150ಕ್ಕೂ ಹೆಚ್ಚು ಜನರಿಂದ ಚೀಟಿ ಹಾಕಿಸಿಕೊಂಡು ಅವರ ಚಿನ್ನವನ್ನ ಅಡಮಾನ ಇಟ್ಟುಕೊಂಡಿದ್ದ. ಲಕ್ಷಾಂತರ ರೂಪಾಯಿಯನ್ನ ಸಾಲ ಮಾಡಿ ಮಹಿಳೆಯರು ಇವನ ಬಳಿ ಹಣ ಕಟ್ಟಿದ್ದರು. ವರಮಹಾಲಕ್ಷ್ಮೀ ಹಬ್ಬ ಎಂದು ಚೀಟಿ ಹಾಕಿದ್ದವರು ಚಿನ್ನ ಬಿಡಿಸಿಕೊಂಡು ಬರಲು ಹೋದಾಗ, ಚಿನ್ನವನ್ನೆಲ್ಲಾ ಅಡವಿಟ್ಟು ಮನೆ ಖಾಲಿ ಮಾಡಿಕೊಂಡು ಸೇಟು ಪರಾರಿಯಾಗಿರುವ ವಂಚನೆ ಬೆಳಕಿಗೆ ಬಂದಿದೆ.

ಚಿನ್ನದ ಅಂಗಡಿ ಮಾಲೀಕ ಮನೆ ಖಾಲಿ ಮಾಡಿಕೊಂಡು ಎಸ್ಕೇಪ್‌ ಆಗಿರುವುದನ್ನ ಕಂಡ ಗ್ರಾಮಸ್ಥರು ಆತಂಕಗೊಳಗಾಗಿ ತಕ್ಷಣ ಪೊಲೀಸ್‌ ಠಾಣೆಗೆ ದೌಡಾಯಿಸಿದ್ದಾರೆ. ಸೇಟುವಿನಿಂದ ವಂಚನೆಗೊಳಗಾದ ಗ್ರಾಮಸ್ಥರು ಸೂರ್ಯ ನಗರದ ಪೊಲೀಸ್‌ ಠಾಣೆ ಎದುರು ಜಮಾಯಿಸಿದ್ದು, ವರಮಹಾಲಕ್ಷ್ಮೀ ಹಬ್ಬಕ್ಕೆಂದು ಹಣ ಕಟ್ಟಿದ್ದವರು ಇದೀಗ ಬೀದಿಗೆ ಬಿದ್ದಿದ್ದಾರೆ. ಇನ್ನು ಸೂರ್ಯ ನಗರ ಪೊಲೀಸ್‌ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

*ಸ್ವಾತಿ.ಎಸ್.

 

- Advertisement -

Latest Posts

Don't Miss