ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇನ್ನೂ ಒಂದು ವಾರದ ಮಟ್ಟಿಗೆ ಮಳೆ ಸುರಿಯುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಬಹುತೇಕ ಕಡೆ, ಉತ್ತರ ಒಳನಾಡು ಜಿಲ್ಲೆಗಳ ಕೆಲವು ಕಡೆ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳ ಹಲವು ಕಡೆಗಳಲ್ಲಿ, ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಹವಾಮಾನದಲ್ಲಿ ಬದಲಾವಣೆ ಆಗಿದೆ. ಅಕ್ಟೋಬರ್ 27ರಂದು ಭಾರೀ ಮಳೆಯಾಗಲಿದೆಯಂತೆ.
ಬೆಂಗಳೂರಿನಲ್ಲೂ ಮೋಡಕವಿದ ವಾತಾವರಣ ಮುಂದುವರೆದಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನವೆಂಬರ್ 2ರವರೆಗೆ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಕೆಲವೊಮ್ಮೆ ವ್ಯಾಪಕವಾಗಿ ಹಾಗೂ ಕೆಲವೊಮ್ಮೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಅಕ್ಟೋಬರ್ 28ರಂದು ಅಲ್ಲಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು, ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ, ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಬೆಂಗಳೂರಿಗೆ ಅಕ್ಟೋಬರ್ 25 ಹಾಗೂ 26ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಕರ್ನಾಟಕದ ಜಿಲ್ಲೆಗಳಿಗೆ ಅಕ್ಟೋಬರ್ 26ರಂದು ಯೆಲ್ಲೋ ಅಲರ್ಟ್ ಹಾಗೂ 27 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಒಟ್ನಲ್ಲಿ, ಮುಂದಿನ ಏಳು ದಿನಗಳ ಕಾಲ ಕರ್ನಾಟಕದ ವಿವಿಧೆಡೆ
ರಣಮಳೆ ಆರ್ಭಟಿಸುವ ಸಾಧ್ಯತೆ ಇದೆ.
ಇನ್ನು, ಆಂಧ್ರಪ್ರದೇಶ, ಛತ್ತೀಸ್‌ಗಢ, ಗೋವಾ, ಮಧ್ಯಪ್ರದೇಶ, ಮಹಾರಾಷ್ಟ್ರ, ಸೌರಾಷ್ಟ್ರ, ಕಚ್, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕೇರಳ, ಕರ್ನಾಟಕ, ದಕ್ಷಿಣ ಕೊಂಕಣ, ಲಕ್ಷದ್ವೀಪ, ಕೊಮೊರಿನ್ ಪ್ರದೇಶಗಳು, ಮಾಲ್ಡೀವ್ಸ್, ಆಗ್ನೇಯ ಮತ್ತು ನೈಋತ್ಯ ಅರೇಬಿಯನ್ ಸಮುದ್ರದ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಪೂರ್ವ ಮಧ್ಯ ಮತ್ತು ಪಶ್ಚಿಮ ಮಧ್ಯ ಅರೇಬಿಯನ್ ಸಮುದ್ರದ ಅನೇಕ ಭಾಗಗಳಲ್ಲಿ, ಮನ್ನಾರ್ ಕೊಲ್ಲಿಯ ಮೇಲೆ, ತಮಿಳುನಾಡು ಮತ್ತು ಪಕ್ಕದ ದಕ್ಷಿಣ ಆಂಧ್ರಪ್ರದೇಶ, ಶ್ರೀಲಂಕಾ ಕರಾವಳಿಗಳಲ್ಲಿ, ಆಗ್ನೇಯ ಮತ್ತು ಪಕ್ಕದ ಕೆಲವು ಭಾಗಗಳಲ್ಲಿ, ಪೂರ್ವ ಮಧ್ಯ, ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ, ನೈಋತ್ಯ ಬಂಗಾಳ ಕೊಲ್ಲಿಯ ಅನೇಕ ಭಾಗಗಳಲ್ಲಿ ಮತ್ತು ಅಂಡಮಾನ್ ಸಮುದ್ರದ ಮೇಲೆ ಗಾಳಿಯ ವೇಗ ಗಂಟೆಗೆ 45 ಕಿಲೋ ಮೀಟರ್‌ನಿಂದ 55 ಕಿಲೋ ಮೀಟರ್‌ವರೆಗೆ ಬಿರುಗಾಳಿ ಬೀಸುವ ಸಾಧ್ಯತೆ ಇದೆ.

