ಆಂಧ್ರಪ್ರದೇಶದ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗಿನ ಜಾವ ನಡೆದ ಭಾರಿ ಎನ್‌ಕೌಂಟರ್‌ನಲ್ಲಿ ದೇಶದ ಅತ್ಯಂತ ಹುಡುಕಲ್ಪಟ್ಟ ನಕ್ಸಲ್ ಕಮಾಂಡರ್ ಮದ್ವಿ ಹಿದ್ಮಾ ಹತನಾಗಿದ್ದಾನೆ ಎಂಬ ದೊಡ್ಡ ಬ್ರೇಕಿಂಗ್ ಮಾಹಿತಿ ಹೊರಬಿದ್ದಿದೆ. 150 ಕ್ಕೂ ಹೆಚ್ಚು ಸೈನಿಕರ ಹತ್ಯೆಗೆ ಕಾರಣನಾಗಿದ್ದ ಈ ಟಾಪ್ ಮಾವೋ ನಾಯಕನ ಸಾವು, ನಕ್ಸಲ್ ಚಟುವಟಿಕೆಗಳಿಗೆ ಭಾರೀ ಹೊಡೆತವೆಂದು ಭದ್ರತಾ ವಲಯ ಪರಿಗಣಿಸುತ್ತಿದೆ.
ಆಂಧ್ರ–ಛತ್ತೀಸ್‌ಗಢ–ತೆಲಂಗಾಣ ತ್ರಿ-ಜಂಕ್ಷನ್ ಬಳಿ ನಡೆದ ಈ ಕಾರ್ಯಾಚರಣೆಯಲ್ಲಿ ಕನಿಷ್ಠ ಆರು ಬಂಡುಕೋರರ ಮೃತದೇಹಗಳು ಪತ್ತೆಯಾಗಿದೆ. ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ ಬೆಟಾಲಿಯನ್ ಕಮಾಂಡರ್ ಆಗಿದ್ದಹಿದ್ಮಾ, CPI ಮಾವೋವಾದಿಗಳ ಉನ್ನತ ನಿರ್ಧಾರ ಮಂಡಳಿಯಲ್ಲಿದ್ದ ಏಕೈಕ ಬುಡಕಟ್ಟು ಸದಸ್ಯನಾಗಿದ್ದ. ಆತನ ಬಂಧನಕ್ಕೆ 1 ಕೋಟಿ ರೂ. ಬಹುಮಾನ ಘೋಷಿಸಲಾಗಿತ್ತು. ಎನ್‌ಕೌಂಟರ್‌ನಲ್ಲಿ ಆತನ ಪತ್ನಿ ರಾಜಕ್ಕಾ ಕೂಡ ಸಾವನ್ನಪ್ಪಿರುವುದು ಮೂಲಗಳ ಮಾಹಿತಿ.
1996ರಲ್ಲಿ ಕೇವಲ 17ನೇ ವಯಸ್ಸಿನಲ್ಲಿ ನಕ್ಸಲ್ ಸಂಘಟನೆಯಲ್ಲಿ ಕಾಲಿಟ್ಟ ಹಿದ್ಮಾ, 2017ರ ಬುರ್ಕಪಾಲ್ ದಾಳಿ, ದಂತೇವಾಡ ದಾಳಿ ಮತ್ತು 2021ರ ಭೀಕರ ಅಂಬುಷ್ ಸೇರಿದಂತೆ 26 ಪ್ರಮುಖ ಸಶಸ್ತ್ರ ದಾಳಿಗಳ ರೂವಾರಿ. ದಂತೇವಾಡ ದಾಳಿಯಲ್ಲಿ 76 ಸಿಆರ್‌ಪಿಎಫ್ ಹತ್ಯೆಗೆ ಆತನೇ ಮುಂಚೂಣಿಯಲ್ಲಿದ್ದನೆಂದು ಪೊಲೀಸರು ದೃಢಪಡಿಸಿದ್ದಾರೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

