ನವದೆಹಲಿ: ದೇಶದ ಪ್ರಮುಖ ಹಾಲು ಮತ್ತು ಡೇರಿ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪನಿಗಳಾದ ಅಮುಲ್ ಮತ್ತು ಮದರ್ ಡೈರಿ ಹಾಲಿನ ಮಾರಾಟ ದರವನ್ನು ಲೀಟರ್ ಗೆ 2 ರೂ ಏರಿಕೆ ಮಾಡಿವೆ. ಈ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ.
ಅಮುಲ್ ಸದ್ಯಕ್ಕೆ ಅಹಮದಾಬಾದ್ ಮತ್ತು ಸೌರಾಷ್ಟ್ರ ಮಾರುಕಟ್ಟೆಯಲ್ಲಿ ದರವನ್ನು ಮಾತ್ರ ಏರಿಕೆ ಮಾಡಿದೆ. ಆ ಪ್ರದೇಶಗಳಲ್ಲಿ ಅಮುಲ್ ಗೋಲ್ಡ್ ಹಾಲಿನ ದರ ಅರ್ಧ ಲೀಟರ್ ಗೆ ರೂ.31ಗೆ ಏರಿಕೆಯಾಗಲಿದೆ. ಅಮುಲ್ ತಾಜಾ ಹಾಲಿನ ಅರ್ಧ ಲೀಟರ್ ರೂ.25ಕ್ಕೆ ಹೆಚ್ಚಲಿದೆ. ಅಮುಲ್ ಶಕ್ತಿಯ ಅರ್ಧ ಲೀಟರ್ ಹಾಲಿನ ದರ ರೂ.28 ಆಗಲಿದೆ.
ಹಾಲು ಉತ್ಪಾದನೆ ಮತ್ತು ಮಾರಾಟ ವೆಚ್ಚದಲ್ಲಿನ ಏರಿಕೆಯನ್ನು ಸರಿದೂಗಿಸಲು ಈ ದರ ಏರಿಕೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೇ ಜಾನುವಾರು ಆಹಾರ ವೆಚ್ಚವೇ ಸರಿಸುಮಾರು ಶೇ.20ರಷ್ಟು ಹೆಚ್ಚಾಗಿದೆ. ಉತ್ಪಾನೆ ವೆಚ್ಚ ಹೆಚ್ಚಳವನ್ನು ಪರಿಗಣಿಸಿ, ನಮ್ಮ ಹಾಲು ಒಕ್ಕೂಟಗಳು ಹಾಲು ಖರೀದಿ ದರವನ್ನು ಶೇ.8-9ರಷ್ಟು ಏರಿಕೆ ಮಾಡಿದೆ ಎಂದು ಅಮುಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಅಮುಲ್ ಅಲ್ಲದೇ ಮದರ್ ಡೇರಿ ಕೂಡ ಎಲ್ಲಾ ಮಾದರಿಯ ಹಾಲಿಗೂ ಅನ್ವಯವಾಗುವಂತೆ 2 ರೂ ಹೆಚ್ಚಳ ಮಾಡಿದೆ.