Movie News: ಬಾಕ್ಸಾಫೀಸ್‌ನಲ್ಲೀಗ ಪುಷ್ಪರಾಜ್ ಹವಾ ಜೋರಾಗಿದೆ. ಸುಕ್ಕು- ಅಲ್ಲು ಅರ್ಜುನ್ ಜೋಡಿಯ ಮೋಡಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಎಲ್ಲೆಡೆ ಬಂದ ಮಿಶ್ರ ಪ್ರತಿಕ್ರಿಯೆ ಮಧ್ಯೆ ಕೂಡ ಫಸ್ಟ್ ಡೇ ‘ಪುಷ್ಪ’-2 ಭರ್ಜರಿ ಕಲೆಕ್ಷನ್ ಮಾಡಿದೆ. ಹಲವು ದಾಖಲೆ ಮುರಿದು ಮುನ್ನುಗ್ಗುತ್ತಿದೆ ಎಂಬುದು ವಿಶೇಷ. ಈ ಹಾದಿಯಲ್ಲಿ ‘KGF’-2 ಚಿತ್ರವನ್ನು ಕೂಡ ಹಿಂದಿಕ್ಕಿದೆ.
ಯಶ್ ನಟನೆಯ ‘KGF’-2 ಸಿನಿಮಾ ಎರಡು ವರ್ಷದ ಹಿಂದೆ ರಿಲಿಸ್ ಆಗಿತ್ತು. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಕೂಡ ರಾಕಿಭಾಯ್ ಅಬ್ಬರಿಸಿ ಬೊಬ್ಬಿರಿದಿದ್ದು ಗೊತ್ತೇ ಇದೆ. ಕೋಟಿ ಕೋಟಿ ಕೊಳ್ಳೆ ಹೊಡೆದು ಕಾಲರ್ ಎಗರಿಸಿದ್ದು ನೊಡಿದ್ದೀರಿ. ಇದೀಗ ಪುಷ್ಪರಾಜ್ ಆರ್ಭಟ ತುಸು ಜೋರಾಗಿಯೇ ಇದೆ. ಮೊದಲ ದಿನ ಈ ಚಿತ್ರ ಭಾರತದಲ್ಲಿ 175 ಕೋಟಿ ರೂ. ಮಾಡಿರುವ ಅಂದಾಜಿದೆ ಎಂಬುದು ಸಿನಿಪಂಡಿತರ ಲೆಕ್ಕಾಚಾರ.
ಮೊದಲಿನಿಂದ ‘ಕೆಜಿಎಫ್ -2’ ವರ್ಸಸ್ ‘ಪುಷ್ಪ-2’ ಎನ್ನುವ ಚರ್ಚೆ ನಡೆಯುತ್ತಿದೆ. ಅದಕ್ಕೆ ನಾನಾ ಕಾರಣಗಳಿವೆ. ಇನ್ನು ಬುಧವಾರವೇ ‘ಪುಷ್ಪ-2’ ಸಿನಿಮಾ ಪೇಯ್ಡ್ ಪ್ರೀಮಿಯರ್ ಶೋಗಳು ಶುರುವಾಗಿ 10 ಕೋಟಿ ರೂ. ಕಲೆಕ್ಷನ್ ಮಾಡಲಾಗಿದೆ ಎಂಬ ಅಂದಾಜಿತ್ತು. ಇನ್ನು ಗುರುವಾರ ಡಿಸೆಂಬರ್ 5 ರಂದು 165 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ ಈಗಾಗಲೇ sacnilk.com ವರದಿ ಮಾಡಿದೆ.
ಕೆಜಿಎಫ್ ಸರಣಿಗೂ ಪುಷ್ಪ ಸರಣಿಗೂ ಸಾಕಷ್ಟು ಸಾಮ್ಯತೆ ಇದೆ. ಕೆಲ ಸನ್ನಿವೇಶಗಳನ್ನು ಕಾಪಿ ಮಾಡಿದ್ದಾರೆ ಎಂದು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಸುಕುಮಾರ್ ಶಿಷ್ಯ ಬುಚ್ಚಿ ಬಾಬು, “ಒಂದು ‘ಪುಷ್ಪ’ ಹತ್ತು ‘ಕೆಜಿಎಫ್’ ಚಿತ್ರಗಳಿಗೆ ಸಮ” ಎಂದಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಹಾಗಾಗಿ ಸಹಜವಾಗಿಯೇ ಪೈಪೋಟಿ ಬಗ್ಗೆ ಚರ್ಚೆ ಶುರುವಾಗಿದೆ.
ಸದ್ಯ ಬಿಡುಗಡೆ ಆಗಿರುವ ‘ಪುಷ್ಪ-2’ ಚಿತ್ರಕ್ಕಿಂತ ‘ಕೆಜಿಎಫ್’-2 ಅದ್ಭುತ ಸಿನಿಮಾ. ‘ಕೆಜಿಎಫ್’-2 ಚಿತ್ರವನ್ನ ಸ್ವತಃ ತೆಲುಗು ಪ್ರೇಕ್ಷಕರೇ ಹಾಡಿ ಕೊಂಡಾಡಿದ್ದರು. ಆದರೆ ‘ಪುಷ್ಪ-2’ ಬಗ್ಗೆ ಅಲ್ಲೇ ಬಹಳ ನೆಗೆಟಿವ್ ಕಾಮೆಂಟ್ಸ್ ಬರುತ್ತಿದೆ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ಯಾವ ಸಿನಿಮಾ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನುವ ಚರ್ಚೆ ಸದ್ಯ ಸದ್ದು ಮಾಡುತ್ತಿದೆ. ‘ಪುಷ್ಪ-2’ ಟಿಕೆಟ್ ದರ ಗಣನೀಯವಾಗಿ ಹೆಚ್ಚಿಸಲಾಗಿತ್ತು.
ಇನ್ನು ‘KGF’-2 ಚಿತ್ರ ಬಂದಿದ್ದು 2022ರಲ್ಲಿ. ಆಗಿನ ಲೆಕ್ಕಕ್ಕೂ ಈಗಿನ ಲೆಕ್ಕಕ್ಕೂ ವ್ಯತ್ಯಾಸ ಇದೆ. ‘ಪುಷ್ಪ-2’ ಚಿತ್ರ ಮೊದಲ ದಿನ ಅಂದಾಜು 165 ಕೋಟಿ ರೂ. ಗಳಿಕೆ ಕಂಡಿದೆ. ‘KGF’-2 ಸಿನಿಮಾ 116 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿತ್ತು. ಇನ್ನು sacnilk.com ವರದಿ ಪ್ರಕಾರ ಎರಡೂ ಚಿತ್ರಗಳ ಮೊದಲ ದಿನದ ಕಲೆಕ್ಷನ್ ತಾಳೆ ಹಾಕಿ ನೊಡಿದರೆ, ತೆರೆಕಂಡ ದಿನ ‘KGF’-2 ಸಿನಿಮಾ ಕನ್ನಡ ವರ್ಷನ್ 22.85 ಕೋಟಿ ರೂ. ಹಿಂದಿ 53 ಕೋಟಿ ರೂ. ಮಲಯಾಳಂ 4.9 ಕೋಟಿ ರೂ. ತಮಿಳುನಾಡು 7.9 ಕೋಟಿ ರೂ. ತೆಲುಗು 26.4 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ಸದ್ಯದ ಅಪ್‌ಡೇಟ್ ಪ್ರಕಾರ ‘ಪುಷ್ಪ-2’ 5 ಭಾಷೆಗಳ ಕಲೆಕ್ಷನ್ ಲೆಕ್ಕಾಚಾರವನ್ನೊಮ್ಮೆ ನೋಡುವುದಾದರೆ, ಹಿಂದಿ ವರ್ಷನ್ 67 ಕೋಟಿ ರೂ. ತೆಲುಗು 85 ಕೋಟಿ ರೂ. ತಮಿಳು 7 ಕೋಟಿ ರೂ. ಕರ್ನಾಟಕ 1 ಕೋಟಿ ರೂ. ಹಾಗೂ ಮಲಯಾಳಂ 5 ಕೋಟಿ ರೂ. ಕಲೆಕ್ಷನ್ ಕಂಡಿದೆ. ಮುಖ್ಯವಾಗಿ ‘ಪುಷ್ಪ-2’ ಹಿಂದಿ ವರ್ಷನ್ ಕಲೆಕ್ಷನ್ ಹುಬ್ಬೇರಿಸುವಂತಿದೆ. ‘ಜವಾನ್’ ದಾಖಲೆಯನ್ನು ಹಿಂದಿಕ್ಕಿರುವ ಅಂದಾಜಿದೆ. ವಿಶ್ವದಾದ್ಯಂತ ಮೊದಲ ದಿನ ‘ಪುಷ್ಪ’-2 ಸಿನಿಮಾ 250 ಕೋಟಿ ರೂ ಗ್ರಾಸ್ ಕಲೆಕ್ಷನ್ ಮಾಡಿದೆ ಎಂಬ ಲೆಕ್ಕಾಚಾರವಿದೆ. ಆದರೆ, ಈ ಲೆಕ್ಕವೆಲ್ಲವೂ ಚಿತ್ರತಂಡದಿಂದಲೇ ಅಧಿಕೃತವಾಗಿ ಹೊರಬರಬೇಕಿದೆ.
ವಿಜಯ್ ಭರಮಸಾಗರ, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ