ರೋಗಿಗಳ ದಾಖಲಾತಿ ಬದಲು OPD ಪುಸ್ತಕದಲ್ಲಿ ಸಿನಿಮಾ ಗೀತೆ!

ಜೇವರ್ಗಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿ ದಾಖಲಾತಿ ಪುಸ್ತಕದಲ್ಲಿ ರೋಗಿಗಳ ವಿವರ ಬರೆದಿರಬೇಕಾದ ಆ ಪೇಜ್‌ನಲ್ಲಿ ಸಿಬ್ಬಂದಿಯೊಬ್ಬರು ಸಿನಿಮಾ ಭಕ್ತಿಗೀತೆ ಬರೆದಿದ್ದಾರೆ. ಇದು ರಾಜ್ಯದ ಆರೋಗ್ಯ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಎಬ್ಬಿಸುವಂತಹ ಘಟನೆ ನಡೆದಿದೆ.

ಜೇವರ್ಗಿ ತಾಲ್ಲೂಕಿನ ಮಾರಡಗಿ ಎಸ್.ಎ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವನೆಯ ನಂತರ ಸುಮಾರು 70ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡು ಇದೇ ಆಸ್ಪತ್ರೆಗೆ ದಾಖಲಾಗಿದ್ದರು. ಜೇವರ್ಗಿ ಪಟ್ಟಣದ ಸರ್ಕಾರಿ ಆಸ್ಪತ್ರೆ, ಲೋಕಾಯುಕ್ತ ಎಸ್ಪಿ ಸಿದ್ದರಾಜು ಮತ್ತು ಡಿವೈಎಸ್‌ಪಿ ಗೀತಾ ಬೇನಾಳ ಅವರು ತಪಾಸಣೆಗೆ ಬಂದಿದ್ದರು.

ಮಕ್ಕಳ ಆರೋಗ್ಯ ವಿಚಾರಿಸಲು ಬಂದ ಅಧಿಕಾರಿಗಳು, ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ.
ಚಲನಚಿತ್ರ ಭಕ್ತಿಗೀತೆಯ ಒಂದು ಸಂಪೂರ್ಣ ಹಾಡು, ಆಸ್ಪತ್ರೆಯ ಓಪಿಡಿ ದಾಖಲೆ ಪುಸ್ತಕದಲ್ಲೇ ಬರೆದಿದ್ರು! ಪೂಜಿಸಲೆಂದೇ ಹೂಗಳ ತಂದೆ, ದರುಶನ ಕೋರಿ ನಾ ನಿಂದೇ, ತೆರೆಯೋ ಬಾಗಿಲನು ರಾಮ. ಅಂತ ಹೀಗೆ ‘ಎರಡು ಕನಸು’ ಚಿತ್ರದ ಭಕ್ತಿಗೀತೆಯ ಇಡೀ ಹಾಡನ್ನ ಹೃದಯ ತುಂಬಿಸುವ ಸಾಲುಗಳಲ್ಲಿ ಬರೆದಿದ್ದು ನೋಡುವವರಿಗೆ ತೀವ್ರ ಆಶ್ಚರ್ಯ ತಂದಿದೆ.

ಈ ದೃಶ್ಯ ಕಂಡ ಲೋಕಾಯುಕ್ತ ಎಸ್ಪಿ ಸಿದ್ದರಾಜು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಆಸ್ಪತ್ರೆಯ ವ್ಯವಸ್ಥೆಯನ್ನು ಪರಿಶೀಲಿಸಿ, ಸಿಬ್ಬಂದಿಗೆ ಸೂಕ್ತ ಎಚ್ಚರಿಕೆ ನೀಡಿದರು ಹಾಗೂ ವರದಿ ಸಲ್ಲಿಸಲು ಆದೇಶಿಸಿದರು.

About The Author