ಮುಡಾ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿಗೆ ಬಿಗ್ ರಿಲೀಫ್ ಸಿಕ್ಕಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಇಡಿ ಅರ್ಜಿ ಸಲ್ಲಿಸಿತ್ತು. ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಮುಡಾ ಹಗರಣದಲ್ಲಿ ಜಾರಿ ನಿರ್ದೇಶನಾಲಯಕ್ಕೆ, ಸುಪ್ರೀಂಕೋರ್ಟ್ ಇಂದು ತರಾಟೆ ತೆಗೆದುಕೊಂಡಿದೆ. ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಬಿ.ಆರ್. ಗವಾಯಿ ನೇತೃತ್ವದ ಪೀಠ, ಇಡಿಯನ್ನು ಟೀಕಿಸಿದೆ. ರಾಜಕಾರಣಿಗಳು ರಾಜಕಾರಣ ಮಾಡಿಕೊಳ್ಳಲಿ. ಇದರಲ್ಲಿ ನಿಮ್ಮನ್ನು ಏಕೆ ಬಳಸಿಕೊಳ್ಳಲಾಗುತ್ತಿದೆ. ರಾಜಕೀಯ ಹೋರಾಟಕ್ಕೆ ಇಡಿ ಬಳಕೆ ಆಗುತ್ತಿರುವುದೇಕೆ. ರಾಜಕೀಯ ಹೋರಾಟವನ್ನು ಚುನಾವಣೆಗೆ ಬಳಸಿಕೊಳ್ಳಲಿ.
ನಮ್ಮ ಬಾಯಿ ತೆರೆಯುವಂತೆ ಮಾಡಬೇಡಿ. ಇಡಿ ಬಗ್ಗೆ ನಾವು ಕೆಲವು ಕಟು ಹೇಳಿಕೆಗಳನ್ನು ನೀಡಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ನನಗೆ ಅರಿವಿದೆ. ಈಗ ದೇಶಾದ್ಯಂತ ನೀವು ಇದನ್ನೇ ಮುಂದುವರಿಸುವುದಿಲ್ಲ ಅಂತಾ ನಾವು ಭಾವಿಸುತ್ತೇವೆ. ರಾಜಕೀಯ ಯುದ್ಧ, ಮತದಾರರ ಮುಂದೆ ನಡೆಯಲಿ ಅಂತಾ, ಸುಪ್ರೀಂಕೋರ್ಟ್ ಚಾಟಿ ಬೀಸಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ, ಸಿಎಂ ಪತ್ನಿಗೆ 14 ನಿವೇಶನಗಳ ಹಂಚಿಕೆ ಮಾಡಲಾಗಿತ್ತು. ಈ ಹಂಚಿಕೆಯಲ್ಲಿ ಅಕ್ರಮವಾಗಿದೆ ಅಂತಾ ಆರೋಪಿಸಲಾಗಿತ್ತು. ಸಿಎಂ ಪತ್ನಿ ಪಾರ್ವತಿ ವಿರುದ್ಧದ ಸಮನ್ಸ್ ಅನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಇಡಿ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಸುಪ್ರೀಂ ಆದೇಶದಿಂದ ಜಾರಿ ನಿರ್ದೇಶನಾಲಯಕ್ಕೆ ಭಾರೀ ಹಿನ್ನಡೆಯಾಗಿದೆ.