Hubli News: ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಮುಡಾ ಹಗರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಆಗಿದೆ. ಇದು ಸಂಪೂರ್ಣವಾಗಿ ಸಿದ್ದರಾಮಯ್ಯನವರ ಗಮನಕ್ಕೆ ಇದ್ದೇ ಆಗಿರುವ ಹಗರಣ. ಇದು ನಿರ್ಧಾರ ಆಗಿದ್ದು 2017 ರಲ್ಲಿ. ಆದರೆ 2014 ರಿಂದ 2018 ರಲ್ಲಿ ಇದರ ಪ್ರಮುಖ ಬೆಳವಣಿಗೆ ನಡೆದಿದೆ. ಏನೂ ಮಾಡಿಲ್ಲ ಅಂದರೆ ತರಾತುರಿಯಲ್ಲಿ ಜಿಲ್ಲಾಧಿಕಾರಿಯನ್ನು ಏಕೆ ವರ್ಗಾವಣೆ ಮಾಡಿದ್ದಾರೆ ? ಎಂದು ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಮತ್ತು ಅವರ ಮಗನ ಅನುಮತಿ ಇಲ್ಲದೇ ಇದು ನಡೆಯಲು ಸಾಧ್ಯವಿಲ್ಲ. ಸ್ವಂತಕ್ಕೆ ಲಾಭ ಮಾಡಿಕೊಳ್ಳಲು ದೊಡ್ಡ ಪ್ರಮಾಣದಲ್ಲಿ ನಡೆದ ಭ್ರಷ್ಟಾಚಾರ. ಹೀಗಾಗಿ ಪ್ರಕರಣದ ತನಿಖೆಗೆ ಸಿಬಿಐ ಗೆ ವಹಿಸಿಬೇಕು. ಇದನ್ನು ಮಾಡದಿದ್ರೆ ಸಿಎಂ ಸಿದ್ದರಾಮಯ್ಯ ನಾನು ಲೋಹಿಯಾ ವಾದಿ, ಸಮಾಜವಾದಿ ಅಂತ ಹೇಳಿಕೊಳ್ಳಲು ಅರ್ಹರಲ್ಲಾ. ಮುಡಾ ಮತ್ತು ಎಸ್ಸಿ ಎಸ್ಟಿ ಹಗರಣದಲ್ಲಿ ನೇರವಾಗಿ ಸಿಎಂ ಭಾಗಿಯಾಗಿದ್ದಾರೆ ಎನ್ನುವುದು ನನ್ನ ಬಲವಾದ ಆರೋಪ. ಪ್ರಕರಣ ಮುಚ್ಚಿ ಹಾಕಲು, ತರಾತುರಿಯಲ್ಲಿ ಅವರಿವರನ್ನು ಎಸ್ಐ ಟಿ ಬಂಧನ ಮಾಡಲಾಗುತ್ತಿದೆ ಎಂದು ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ಇಷ್ಟು ದಿನ ನಾಗೇಂದ್ರ ತಪ್ಪಿಸಿಕೊಳ್ಳಲು ಅವಕಾಶ ನೀಡಿ ಈಗ ನೋಟಿಸ್ ನೀಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಅತ್ಯಂತ ಭ್ರಷ್ಟಾಚಾರದ ಸರ್ಕಾರ. ಭ್ರಷ್ಟಾಚಾರ ನಡೆಸಲು ಹೊಸ ಹೊಸ ಮಾರ್ಗ ಕಂಡುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯತ್ತ ಸಾಗುತ್ತಿದೆ ಇದರಲ್ಲೂ ಭ್ರಷ್ಟಾಚಾರ ಹೇಗೆ ಮಾಡಬೇಕು ಅಂತ ಸಿಎಂಗೆ ಗೊತ್ತು. ಬಣವೆಗೆ ಬೆಂಕಿ ಹತ್ತಿದಾಗ ಅದರಲ್ಲಿ ಬೀಡಿ ಅಥವಾ ಸಿಗರೇಟ್ ಹೇಗೆ ಹಚ್ಚಬೇಕು ಎನ್ನುವುದು ಸಿದ್ದರಾಮಯ್ಯಗೆ ಚೆನ್ನಾಗಿ ಗೊತ್ತು.ತಮ್ಮ ಕೊನೆಯ ಅವಧಿ ಅಂತ ತಿಳಿದು ಭ್ರಷ್ಟಾಚಾರದ ಪರಮಾವಧಿಗೆ ಸಿದ್ದರಾಮಯ್ಯ ತಲುಪುತ್ತಿದ್ದಾರೆ. ಡಿಸಿ ವರ್ಗಾವಣೆ ಮಾಡಿದ್ದು ಭ್ರಷ್ಟಾಚಾರಕ್ಕೆ ಸಾಕ್ಷಿ. ಸಿದ್ದರಾಮಯ್ಯ ಕಾನೂನು ಪ್ರಕಾರ ಪರಿಹಾರ ತೆಗೆದುಕೊಳ್ಳಬೇಕಿತ್ತು. ಸಿಬಿಐ ಬಗ್ಗೆ ಸಿದ್ದರಾಮಯ್ಯಗೆ ಯಾಕೆ ಭಯ ? ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿದ್ದು ಇದೆ ಮೊದಲೇನಲ್ಲಾ. ಸಿಎಂ ಸಿದ್ದರಾಮಯ್ಯ ಈ ಹಿಂದೆಯೂ ಡಿನೋಟಿಫಿಕೇಶನ್ ಮಾಡಿದ್ದರು. ಆದರೆ ಅದರಿಂದ ಅವರು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಸಿಎಂ ಸ್ಥಾನಕ್ಕೆ ಯಾರು ಟವಲ್ ಹಾಕಿದ್ದಾರೆ ಗೊತ್ತಿಲ್ಲ. ಸಿಎಂ ವಿರುದ್ಧ ಡಿಸಿಎಂ ಡಿಸಿಎಂ ವಿರುದ್ಧ ಸಿಎಂ ಪರಸ್ಪರ ಬತ್ತಿ ಇಡುವ ಕಾರ್ಯ ಮೊದಲಿಂದಲೂ ಇದೆ. ಆಂತರಿಕ ಕಚ್ಚಾಟ ಮೊದಲಿಂದಲೂ ಇದೆ. ತಮ್ಮ ಸ್ವಾರ್ಥಕ್ಕೆ ಯಾರು ಸಮಾಜವನ್ನು ಬಳಸಿಕೊಳ್ಳ ಬಾರದು. ದುಡ್ಡು ಕೊಟ್ಟು ಜನರನ್ನು ಕರೆಯಿಸಿ ಯಾರು ಬೇಕಾದರೂ ಶಕ್ತಿ ಪ್ರದರ್ಶನ ಮಾಡಬಹುದು. ಅಹಿಂದ ಬಳಸಿಕೊಂಡು ನಾನು ಶಕ್ತಿ ಪ್ರದರ್ಶನ ಮಾಡಬಹುದು ಅಂತ ಸಿಎಂ ಯೋಚನೆ ಮಾಡುತ್ತಿದ್ದಾರೆ. ಆದರೆ ಇದನ್ನು ಮಾಡುವ ಬದಲು ನಿಮ್ಮ ಮೇಲಿನ ಹಗರಣ ಆರೋಪಗಳಿಂದ ಮೊದಲು ಮುಕ್ತರಾಗಿ ಬಳಿಕ ಸಮಾವೇಶ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಮಹಾದಾಯಿ ಪ್ರವಾಹ ಸಮಿತಿ ಭೇಟಿ ಬಗ್ಗೆ ಬೇರೆ ಅರ್ಥ ಕೊಡಬಾರದು. ಟ್ರಿಬ್ಯುನಲ್ ಆದ ಯೋಜನೆಗೆ ಸಮಿತಿಯನ್ನು ನೇಮಕ ಮಾಡಲಾಗುತ್ತೆ. ಅದೇ ರೀತಿ ಮಹದಾಯಿ ಯೋಜನೆಗೂ ಸಮಿತಿಯನ್ನು ನೇಮಕ ಮಾಡಲಾಗಿದೆ. ಮಹದಾಯಿ ಪ್ರವಾಹ ಸಮಿತಿ ಯೋಜನಾ ಪ್ರದೇಶಕ್ಕೆ ಭೇಟಿ ನೀಡಲಿದೆ. ಮಹದಾಯಿ ವ್ಯಾಪ್ತಿಯಲ್ಲಿ ಏನೆಲ್ಲ ಚಟುವಟಿಕೆ ನಡೆದಿವೆ ಅನ್ನೋದರ ಅಧ್ಯಯನ ಮಾಡುತ್ತೆ. ಹಾಗೆಂದು ಈ ಸಮಿತಿ ಕೇಂದ್ರಕ್ಕೆ ವರದಿ ನೀಡಲ್ಲ. ಗೋವಾ ಸಿಎಂ ಮನವಿ ಮೇರೆಗೆ ಈ ಸಮಿತಿ ಬರುತ್ತಿಲ್ಲ. ರೊಟೀನ್ ಪ್ರಕ್ರಿಯೆ ಭಾಗವಾಗಿ ಈ ಸಮಿತಿ ಭೇಟಿ ಕೊಡುತ್ತಿದೆ. ಈಗಾಗಲೇ ಮಹದಾಯಿ ಯೋಜನೆಯ ಡಿಪಿಎಆರ್ ಗೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ.
52 ಹೆಕ್ಟರ್ ಪ್ರದೇಶದ ದಟ್ಟ ಅರಣ್ಯದಲ್ಲಿ ಯೋಜನೆ ಕೈಗೊಳ್ಳಲು ಅನುಮತಿ ಬೇಕಿದೆ. ಟೈಗರ್ ಕಾರಿಡಾರ್ ನಲ್ಲಿ ಅನುಮತಿ ಅಗತ್ಯವಿದೆ. ವನ್ಯಜೀವಿ ಮಂಡಳಿ ಅನುಮತಿ ಸಿಕ್ಕರೆ ಯೋಜನೆ ಕಾಮಗಾರಿ ಆರಂಭವಾಗುತ್ತೆ. ಪ್ರವಾಹ ಸಮಿತಿ ಭೇಟಿಯಿಂದ ಕರ್ನಾಟಕಕ್ಕೆ ಯಾವುದೇ ರೀತಿಯ ಧಕ್ಕೆ ಇಲ್ಲ. ಈಗಾಗಲೇ ಕೇಂದ್ರ ಕೊಟ್ಟಿರುವ ಡಿಪಿಎಆರ್ ಅನುಮತಿಗೂ ತೊಂದರೆ ಆಗಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.




