ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ವಿಪಕ್ಷ ನಾಯಕರು ಸಿಎಂ ಸಿದ್ದರಾಮಯ್ಯ ವಿರುದ್ಧ ಅಸ್ತ್ರವಾಗಿ ಪ್ರಯೋಗಿಸುತ್ತಿದ್ರೆ, ಇತ್ತ ಆಡಳಿತ ಪಕ್ಷದ ನಾಯಕರು ಹಗರಣವನ್ನು ಸಮರ್ಥನೆ ಮಾಡಿಕೊಳ್ಳುತ್ತಿವೆ. ಇದೀಗ ಇದೇ ವಿಚರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುಡಾ ಹಗರಣ ಸಿಬಿಐಗೆ ವಹಿಸಲು ಯಾಕೆ ಭಯ? ಮೈಸೂರು ಜಿಲ್ಲಾಧಿಕಾರಿಯನ್ನ ಯಾಕೆ ವರ್ಗಾವಣೆ ಮಾಡಿದ್ರಿ? ನೀವು ರಾಜೀನಾಮೆ ಕೊಟ್ಟು ತನಿಖೆ ಮಾಡಿಸಿ ಎಂದು ಹೇಳಲ್ಲ ಮುಡಾ ಹಗರಣವನ್ನ ಸಿಬಿಐ ತನಿಖೆಗೆ ವಹಿಸಿ. ತನಿಖೆಯನ್ನ ಆಳವಾಗಿ ಮಾಡಬೇಕು ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಬಹಳ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಆಗಿದೆ. ಮೇಲ್ನೋಟಕ್ಕೆ ಇದು ಸ್ಪಷ್ಟವಾಗಿದೆ. 2017 ರಲ್ಲಿ ಈ ನಿರ್ಣಯಗಳಾಗಿವೆ. ಸಿದ್ದರಾಮಯ್ಯ ಗಮನದಲ್ಲಿ ಇದ್ದೇ ಆಗಿರುವ ಬಹುದೊಡ್ಡ ಹಗರಣ ಎಂದು ಆರೋಪಿಸಿದ್ದಾರೆ.
ಒಂದು ಕಡೆ ವಾಲ್ಮೀಕಿ ಹಗರಣ, ಮತ್ತೊಂದು ಕಡೆ ಮುಡಾ ಹಗರಣ. ವಾಲ್ಮೀಕಿ ಹಗರಣ ಮುಚ್ಚಿ ಹಾಕಲು ಎಸ್ಐಟಿಯವರು ಕೆಲವರನ್ನು ಬಂಧಿಸಿದ್ದಾರೆ. ಅವರಿಗೆ ಅವಕಾಶ ಕೊಟ್ಟು ನೋಟಿಸ್ ಕೊಟ್ಟಿದ್ದಾರೆ. ನಾಗೇಂದ್ರ ಅವರಿಗೆ ಶುಕ್ರವಾರ ನೋಟಿಸ್ ಕೊಟ್ಟಿದ್ದಾರೆ. ಎಲ್ಲವನ್ನೂ ಮುಚ್ಚಿ ಹಾಕಲು ಷಡ್ಯಂತ್ರ ನಡೆದಿದೆ. ಸಿದ್ದರಾಮಯ್ಯ ಸರ್ಕಾರ ಒಂದು ಕಡುಭ್ರಷ್ಟ ಸರ್ಕಾರ ಎಂದು ಜೋಶಿ ಕಿಡಿಕಾರಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಇಲ್ಲ. ಬೋಗಸ್ ಗ್ಯಾರಂಟಿ ಹೆಸರಲ್ಲಿ ಯಾವ ಕೆಲಸಗಳೂ ನಡೆಯುತ್ತಿಲ್ಲ. ದಿವಾಳಿ ಸರ್ಕಾರದಲ್ಲಿ ಲೂಟಿ ಮಾಡುವ ಕೆಲಸ ನಡೆಯುತ್ತಿದೆ. ಬಣವೆಗೆ ಬೆಂಕಿ ಹಚ್ಚಿ ಸಿಗರೇಟ್ ಹೇಗೆ ಹಚ್ಕೋಬೇಕು ಎಂಬುದನ್ನು ಇವರಿಂದ ನೋಡಿ ಕಲಿಯಬೇಕು. ದಲಿತರ ಹಣ ಗ್ಯಾರಂಟಿಗೆ ಉಪಯೋಗ ಮಾಡಿಕೊಂಡಿದ್ದಾರೆ ಎಂದು ಜೋಶಿ ವಾಗ್ದಾಳಿ ನಡೆಸಿದರು.

