ನಿಮ್ಮ ಮನೆ ಹುಡುಗಿನ ಮದುವೆ ಮಾಡಿ ಕೊಟ್ರೆ 1 ಕೋಟಿ ರೂಪಾಯಿ ಕೊಡ್ತೇವೆ ಎಂದ ಯತ್ನಾಳ್‌ಗೆ ಮುಸ್ಲಿಂ ಮುಖಂಡರು ಸವಾಲು ಹಾಕಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಮುಸ್ಲಿಂ ಯುವತಿ ಮದುವೆಯಾಗುವ ಯುವಕರಿಗೆ 5 ಲಕ್ಷ ರೂ. ನೀಡಲಾಗುವುದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಘೋಷಿಸಿದ್ದರು. ಇದಕ್ಕೆ ಮುಸ್ಲಿಂ ಸಮುದಾಯದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ, ವಿಜಯಪುರದ ಮುಸ್ಲಿಂ ಮುಖಂಡ ಹಮೀದ್ ಮುಶ್ರಿಫ್ ಶಾಸಕರಿಗೆ ಬಹುದೊಡ್ಡ ಸವಾಲು ಎಸೆದಿದ್ದಾರೆ. ನಿಮ್ಮ ಕುಟುಂಬದ ಯುವತಿಯನ್ನು ನಮ್ಮ ಸಮುದಾಯದ ಯುವಕನಿಗೆ ಮದುವೆ ಮಾಡಿ ಕೊಟ್ಟರೆ, ನಾವು ಸಮಾಜದ ಪರವಾಗಿ 1 ಕೋಟಿ 11 ಲಕ್ಷ ರೂಪಾಯಿ ನೀಡುತ್ತೇವೆ ಎಂದು ಮುಶ್ರಿಫ್ ಹೇಳಿದ್ದಾರೆ.
ಯತ್ನಾಳ್ ಪ್ರಚೋದನಾತ್ಮಕ ಹೇಳಿಕೆಗಳು ಸಮಾಜದಲ್ಲಿ ಕೋಮು ವೈಷಮ್ಯ ಹೆಚ್ಚಿಸುತ್ತಿವೆ. ಅವರಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯೂ ನಡೆಯಲ್ಲ ಎಂದು ಹರಿಹಾಯ್ದಿದ್ದಾರೆ.
ಇದರ ಜೊತೆಗೆ, ಯತ್ನಾಳ್ ನೀಡಿದ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಕಲಬುರಗಿಯ ರೋಜಾ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಖಮರ್ ಕಾಲೋನಿಯ ಖಿದ್ಮತ್ ಎ ಮಿಲ್ಲತ್ ಸಮಿತಿಯ ಅಧ್ಯಕ್ಷ ಖಮರ್ ಜುನೈದ್ ಖುರೇಷಿ ಅವರೇ ಈ ಕುರಿತು ದೂರು ದಾಖಲಿಸಿದ್ದಾರೆ.
ಶಾಸಕ ಯತ್ನಾಳ್ ಹೊಸ ರಾಜಕೀಯ ಪಕ್ಷ ಸ್ಥಾಪನೆ ಕುರಿತು ಕೂಡಾ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಹಿನ್ನೆಲೆ, ಅವರ ಹೇಳಿಕೆಗಳ ಉದ್ದೇಶಗಳ ಬಗ್ಗೆ ಚರ್ಚೆ ಜೋರಾಗಿದೆ.

