ರಾಜ್ಯ ರಾಜಕೀಯದಲ್ಲಿ ಕೈಗಡಿಯಾರದ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಕಾರ್ಟಿಯರ್ ವಾಚ್ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ವಾಗ್ವಾದ ನಡೆಯುತ್ತಿರುವ ಬೆನ್ನಲ್ಲೇ, ಡಿಸಿಎಂ ಡಿ.ಕೆ. ಶಿವಕುಮಾರ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ನನಗೆ ಬೇಕಾದರೆ ನೂರು ವಾಚ್‌ಗಳನ್ನೂ ಕಟ್ಟುವ ಶಕ್ತಿ ಇದೆ. ಸಾವಿರ ರೂಪಾಯಿಯ ವಾಚ್ ಕೂಡ ಹಾಕುತ್ತೇನೆ, 10 ಲಕ್ಷದ ವಾಚ್ ಕೂಡ ಹಾಕುತ್ತೇನೆ. ಅದು ನನ್ನ ಸಂಪಾದನೆ, ನನ್ನ ಆಸ್ತಿ. ನನ್ನ ಜೀವನ, ನನ್ನ ವ್ಯವಹಾರ BJPಗೆ ಚೆನ್ನಾಗಿ ಗೊತ್ತಿದೆ ಎಂದು ಅವರು ಕಿಡಿಕಾರಿದರು.
ಬೆಂಗಳೂರು ನಗರದಲ್ಲಿ ನಡೆದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ, ಯಾರು ಯಾವ ಪ್ಯಾಂಟ್ ಹಾಕ್ತಾರೆ, ಯಾವ ಗಡಿಯಾರ ಕಟ್ಟ್ತಾರೆ, ಯಾವ ಕನ್ನಡಕ ಹಾಕ್ತಾರೆ — ಅದು ಅವರ ವೈಯಕ್ತಿಕ ವಿಷಯ. ಕೆಲವರು ಸಾವಿರ ರೂಪಾಯಿಯ ಶೂ ಹಾಕ್ತಾರೆ, ಕೆಲವರು ಲಕ್ಷ ರೂಪಾಯಿಯ ಶೂ ಹಾಕ್ತಾರೆ. ಇವು ರಾಜಕೀಯದ ವಿಷಯವೇ ಅಲ್ಲ ಎಂದರು.
ಇಡಿ ನೋಟಿಸ್ ಕುರಿತು ಪ್ರತಿಕ್ರಿಯಿಸಿದ ಅವರು, ನೋಟಿಸ್ ಓದಿದ್ದೇನೆ. ವಕೀಲರ ಜೊತೆ ಮಾತಾಡಿ ವಿಚಾರಣೆಗೆ ಹೋಗುತ್ತೇನೆ. ಪಕ್ಷಕ್ಕೆ ಹಣ ಕೊಡದೆ ಯಾರಿಗೆ ಕೊಡಬೇಕು? ಎಂದು ಪ್ರತಿಪ್ರಶ್ನೆ ಮಾಡಿದರು. ಬಾಳು ಶಾಶ್ವತವಲ್ಲ. ಮನುಷ್ಯ ಖಾಲಿಹಸ್ತದಿಂದ ಬರ್ತಾನೆ, ಹೋಗೋಾಗ ಪಾಪ–ಪುಣ್ಯ ಮಾತ್ರ ಉಳಿಯುತ್ತದೆ. ಕೆಲಸವೇ ಶಾಶ್ವತ. ನಮ್ಮ ಸರ್ಕಾರ ಜನರ ಗ್ಯಾರಂಟಿ ಸರ್ಕಾರ. 5 ಗ್ಯಾರಂಟಿಗಳ ಮೂಲಕ ಈಗಾಗಲೇ 1 ಲಕ್ಷ ಕೋಟಿ ರೂ ಜನರ ಖಾತೆಗೆ ಜಮಾ ಮಾಡಿದ್ದೇವೆ ಎಂದು ವಿವರಿಸಿದರು.
ಮೇಕೆದಾಟು ಯೋಜನೆ ಜಾರಿಯಾದರೆ ಮೈಸೂರು–ಮಂಡ್ಯ ಪ್ರದೇಶಕ್ಕೆ ಭಾರಿ ಲಾಭ ಎಂದು ಹೇಳಿದ್ದಾರೆ. ದೇವರು ಶಾಪ–ವರ ಕೊಡೋದಿಲ್ಲ. ಅವಕಾಶ ಕೊಡ್ತಾನೆ. ಆ ಅವಕಾಶದಲ್ಲಿ ನಾವು ಏನು ಮಾಡ್ತೀವೇನು ಮುಖ್ಯ ಎಂದು ಡಿಕೆಶಿ ಹೇಳಿದರು. ಕೊನೆಗೆ, ಬೆಲೆ ಏರಿಕೆಯಿಂದ ಸಂಕಷ್ಟಕ್ಕೊಳಗಾದ ಜನರ ನೆರವಿಗಾಗಿ 5 ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವೆ. ನಮ್ಮದು ಅಭಿವೃದ್ಧಿ ಸರ್ಕಾರ. ಕೊಟ್ಟ ಮಾತನ್ನು ನಾವೇ ಉಳಿಸಿಕೊಂಡಿದ್ದೇವೆ ಎಂದು ಡಿಸಿಎಂ ತಿಳಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




