ಮೈಸೂರು: ನಾಡಹಬ್ಬ ಮೈಸೂರು ದಸರಾ ಹಬ್ಬಕ್ಕೆ ಮುನ್ನುಡಿ ಬರೆಯುವ ಗಜಪಯಣಕ್ಕೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಚಾಲನೆ ನೀಡಿದರು.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಾಗರಹೊಳೆಯ ವೀರನಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಕನ್ಯಾ ಲಗ್ನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವುದರ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಯಿತು.
ಅಭಿಮನ್ಯು, ಭೀಮ, ಗೋಪಿ, ಧನಂಜಯ, ವರಲಕ್ಷ್ಮಿ, ಅರ್ಜುನ, ವಿಜಯ, ಮಹೇಂದ್ರ, ಕಂಜನ್ ಆನೆಗಳಿಗೆ ಪುಷ್ಪಾರ್ಚನೆ ಮಾಡಿ, ಫಲತಾಂಬೂಲ ನೀಡಲಾಯಿತು. ಕಲಾ ತಂಡಗಳು, ಮಂಗಳವಾದ್ಯಗಳ ಜೊತೆಗೆ ವರುಣನ ಸಿಂಚನದ ನಡುವೆ ಗಜಪಡೆಗಳು ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಿದವು. ಸುತ್ತ-ಮುತ್ತಲಿನ ಗ್ರಾಮಗಳು ಮತ್ತು ಹಾಡಿಗಳ ನೂರಾರು ಮಹಿಳೆಯರು ಗಜಪಡೆಗೆ ಪೂರ್ಣಕುಂಭ ಸ್ವಾಗತ ಕೋರಿದರು.
ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ, ‘ಗಜಪಯಣಕ್ಕೆ ವಿಜೃಂಭಣೆಯಿಂದ ಚಾಲನೆ ನೀಡಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲರ ನೇತೃತ್ವದಲ್ಲಿ ಆನೆಗಳನ್ನು ಮೈಸೂರಿಗೆ ಕರೆತರಲಾಗುವುದು. ದಸರಾ ಯಶಸ್ವಿಯಾಗಲಿ’ ಎಂದು ಶುಭ ಹಾರೈಸಿದರು.
ಸೆಪ್ಟಂಬರ್ 4 ರಂದು ಅರಮನೆಗೆ ಗಜಪಡೆಗಳ ಆಗಮನವಾಗಲಿದ್ದು, ಅಂದು ಸಂಜೆ 5.30ರಿಂದ 6ರವರೆಗೆ ಕನ್ಯಾ ಲಗ್ನದಲ್ಲಿ ಗಜಪಡೆಗಳನ್ನು ಬರಮಾಡಿಕೊಳ್ಳಲಾಗುತ್ತದೆ.
ಗಜಪಯಣಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಶಾಸಕರಾದ ಜಿ.ಡಿ.ಹರೀಶ್ ಗೌಡ,, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತಿ ಸಿಇಒ ಗಾಯತ್ರಿ ಕೆ.ಎಂ, ನಗರ ಪೊಲೀಸ್ ಆಯುಕ್ತ ರಮೇಶ್ ಬಿ., ಎಸ್ಪಿ ಸೀಮಾ ಲಾಟ್ಕರ್, ಅರಣ್ಯಾಧಿಕಾರಿ ಸೌರಭ್ ಕುಮಾರ್ ಸೇರಿದಂತೆ ಉಪಸ್ಥಿತರಿದ್ದರು.
ವರದಿ :-ರವಿಕುಮಾರ್ ಹುಣಸೂರು.