ಐತಿಹಾಸಿಕ ಕುಸ್ತಿ ಕಲೆಗೆ ರಾಜ್ಯದಲ್ಲಿ ಶ್ರೀರಂಗಪಟ್ಟಣ ಹೆಸರುವಾಸಿಯಾಗಿದೆ. ಮೈಸೂರು ಭಾಗದ ನೆಲದಲ್ಲಿ ಹೆಚ್ಚಿನ ಕುಸ್ತಿ ಪಟುಗಳು ಬೆಳೆದಿದ್ದಾರೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು. ಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ಕುಸ್ತಿ ಬಳಗದ ವತಿಯಿಂದ ಹನುಮ ಜಯಂತಿ ಹಾಗೂ ಹನುಮಮಾಲಾಧಾರಿಗಳ ಸಂಕೀರ್ತನಾ ಯಾತ್ರೆಯ ಅಂಗವಾಗಿ ಶ್ರೀರಂಗನಾಥ ದೇವಾಲಯದ ಆವರಣದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು.
ಪುರುಷರು ಹಾಗೂ ಮಹಿಳೆಯರ ವಿಭಾಗೀಯ ಮಟ್ಟದ ಮ್ಯಾಟ್ ಮೇಲಿನ ಪಾಯಿಂಟ್ ಕುಸ್ತಿ ಪಂದ್ಯಾವಳಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಚಾಲನೆ ನೀಡಿ ಮಾತನಾಡಿದ್ದಾರೆ. ರಾಜ ಮಹರಾಜರ ಕಾಲದಿಂದಲೂ ಕುಸ್ತಿ ಕಲೆ ಹುಟ್ಟಿಕೊಂಡಿದೆ. ಅದರಲ್ಲೂ ಮೈಸೂರು ಭಾಗದ ಕುಸ್ತಿ ಕಲೆ ದೇಶದೆಲ್ಲಡೆ ಹೆಸರು ಮಾಡಿದೆ. ಮೂಡಲಭಾಗಿಲು ಆಂಜನೇಯ ಸ್ವಾಮಿ ಕುಸ್ತಿ ಬಳಗದ ಸದಸ್ಯರು, ಹಿಂದು ಜಾಗರಣ ವೇದಿಕೆಯ ಚಂದನ್ ಸೇರಿದಂತೆ ಅನೇಕರು ಇತರರ ಪಂದ್ಯವನ್ನ ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ಕುಸ್ತಿ ಪಟುಗಳನ್ನ ಅಭಿನಂದಿಸಿ ಗೌರವಿಸಲಾಯಿತು. ಮೈಸೂರು, ಬೆಂಗಳೂರು ಸೇರಿದಂತೆ ನಾನಾ ಕಡೆಗಳಿಂದ ನೂರಾರು ವಿವಿಧ ತೂಕದ ಪೈಲ್ವಾನರುಗಳು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಗಮನ ಸೆಳೆದರು. ವಿಜೇತರಿಗೆ ಬಹುಮಾನದ ಜೊತೆ ನಗದು ನೀಡಲಾಗಿದ್ದು, CPI ಬಿ.ಜಿ ಕುಮಾರ್ ನೇತೃತ್ವದಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಿದರು.
ಬೇರೆ ಬೇರೆ ತೂಕಗಳಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತರಾದ ಜೋಡಿಗಳನ್ನು ಮತ್ತೆ ಡಿ. 03ರ ಬುಧವಾರ ಮಧ್ಯಾಹ್ನ ನಡೆಯುವ ಕುಸ್ತಿ ಪಂದ್ಯದಲ್ಲಿ ಆಡಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ. ಕುಸ್ತಿ ಪಂದ್ಯಾವಳಿ ವೇಳೆ ಕುಸ್ತಿ ಅಭಿಮಾನಿಗಳು ವಿಶೇಷ ಗ್ಯಾಲರಿಯಲ್ಲಿ ಕುಳಿತು ಕುಸ್ತಿ ಪಟುಗಳಿಗೆ ಶಿಳ್ಳೆ ಹೊಡೆದು ಹುರಿದುಂಬಿಸುತ್ತಿದ್ದ ದೃಶ್ಯ ಕಂಡು ಬಂದಿದೆ

