ವಿಶ್ವ ವಿಖ್ಯಾತ ದಸರಾ ಅಂದ್ರೆ ನಾಡಿಗೆ ಹಬ್ಬ. ಎಲ್ಲರೂ ಸಂಭ್ರಮದಿಂದ ದಸರಾ ಆಚರಣೆ ಮಾಡ್ತಾರೆ. ಅದಕ್ಕೂ ಮುಂಚೆ ಹಲವು ಸಿದ್ಧತೆಗಳು ಬೇಕಾಗುತ್ತೆ. ಅದೇ ರೀತಿ ದಸರಾ ಹಬ್ಬದ ಪ್ರಯುಕ್ತ ಅರಮನೆ ಒಳ ಆವರಣದಲ್ಲಿರುವ ದೇವಾಲಯಗಳಿಗೆ ಹೊಸ ಚೈತನ್ಯ ನೀಡುವ ಕಾರ್ಯ ಕೈಗೊಳ್ಳಲಾಗಿದೆ.
ದೇವಸ್ಥಾನಗಳ ಗೋಡೆಗಳಿಗೆ ಸುಣ್ಣಬಣ್ಣ ಹಚ್ಚಲಾಗುತ್ತಿದ್ದು, ಪ್ರತಿಮೆ, ಸ್ತಂಭ, ಶಿಲ್ಪಗಳಿಗೆ ಸ್ವಚ್ಛತೆ ಹಾಗೂ ಅಲಂಕಾರ ಕಾರ್ಯಗಳು ಜೋರಾಗಿ ನಡೆಯುತ್ತಿವೆ. ಅರಮನೆಯ ಪ್ರಮುಖ ಗೋಡೆಗಳಿಗೂ ಬಣ್ಣ ಹಚ್ಚಿ ಕಂಗೊಳಿಸುವಂತೆ ಮಾಡಲಾಗುತ್ತಿದೆ.
ಮೈಸೂರು ಅರಮನೆ ದಸರಾ ಹಬ್ಬದ ಹೃದಯವೆಂದೇ ಕರೆಯಲ್ಪಡುತ್ತದೆ. ಪ್ರತಿವರ್ಷದಂತೆ ಈ ಬಾರಿಯೂ 97,000ಕ್ಕೂ ಹೆಚ್ಚು ದೀಪಗಳಿಂದ ಅರಮನೆ ಬೆಳಗಲಿದ್ದು, ಅದಕ್ಕಾಗಿ ವಿದ್ಯುತ್ ಇಲಾಖೆಯು ಸಿದ್ಧತೆ ಕೈಗೊಂಡಿದೆ. ಬೆಳಕು ವ್ಯವಸ್ಥೆ ಪರಿಶೀಲನೆ, ಬಲ್ಬ್ ಬದಲಾವಣೆ, ಕಂಬಗಳ ಅಲಂಕಾರ ಮೊದಲಾದವು ನಡೆಯುತ್ತಿವೆ. ಇದರೊಂದಿಗೆ, ಅರಮನೆ ಸುತ್ತಮುತ್ತಲಿನ ಉದ್ಯಾನವನ, ಪಥ, ಪಾಕಿರ್ಂಗ್ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ತೀವ್ರಗೊಳ್ಳುತ್ತಿದೆ.
ಮೈಸೂರಿನ ವೈಭವವನ್ನು ಪ್ರತಿಬಿಂಬಿಸುವ ದಸರಾ ಹಬ್ಬಕ್ಕೆ ಇನ್ನೇನು ಕೆಲವು ದಿನಗಳಷ್ಟೇ ಬಾಕಿ ಇರುವಾಗ, ಅರಮನೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹಾಗೂ ನಡೆಯುತ್ತಿರುವ ಸಿದ್ಧತೆಗಳು ನಗರಕ್ಕೆ ಹಬ್ಬದ ಸಂಭ್ರಮವನ್ನು ಮುಂಚಿತವಾಗಿಯೇ ತಂದುಕೊಟ್ಟಿವೆ. ದಸರಾ ಹಬ್ಬದ ಸಂಭ್ರಮ ಸನ್ನಿಹಿತವಾಗುತ್ತಿದ್ದಂತೆ, ಮೈಸೂರು ಅರಮನೆಗೆ ಪ್ರವಾಸಿಗರ ಆಗಮನ ಹೆಚ್ಚಾಗ್ತಿದೆ. ಪ್ರವಾಸಿಗರು ಕುಟುಂಬ ಸಮೇತರಾಗಿ, ಗುಂಪುಗಳಾಗಿ ಅರಮನೆಗೆ ಹರಿದು ಬರ್ತಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ