ಮೈಸೂರು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹುಲಿ ದಾಳಿಗಳ ಪ್ರಕರಣಗಳು ಆತಂಕ ಮೂಡಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುʼ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತೀವ್ರ ಎಚ್ಚರಿಕೆ ನೀಡಿದರು. ಕಳೆದ ಕೆಲ ದಿನಗಳಲ್ಲಿ ಮೂರು ಮಂದಿ ಹುಲಿ ದಾಳಿಗೆ ಬಲಿಯಾದ ಹಿನ್ನೆಲೆಯಲ್ಲಿ, ಪ್ರಾಣಿಗಳ ಸಂಖ್ಯೆ ಹೆಚ್ಚಳದ ಜೊತೆಗೆ ಕಾಡಿನೊಳಗಿನ ಪರಿಸರ ಅಸಮತೋಲನಕ್ಕೂ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಹುಲಿಗಳು ಮತ್ತು ಆನೆಗಳ ಸಂಖ್ಯೆ ಹೆಚ್ಚಾಗಿದೆ, ಕಾಡಿನೊಳಗೆ ನೀರು ಮತ್ತು ಮೇವು ಸಮೃದ್ಧವಾಗಿರಬೇಕು. ಲ್ಯಾಂಟೆನಾ ಸಸ್ಯಗಳು ಕಾಡಿನ ಬಹುಭಾಗವನ್ನು ಆವರಿಸಿಕೊಂಡಿವೆ. ಅವುಗಳನ್ನು ತಕ್ಷಣ ತೆರವುಗೊಳಿಸಿ ಕೆರೆಗಳು, ಗುಂಡಿಗಳಲ್ಲಿ ನೀರಿನ ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.
ಹುಲಿ ದಾಳಿಗೆ ವೈಜ್ಞಾನಿಕ ಕಾರಣವನ್ನು ಪತ್ತೆಹಚ್ಚಲು ರಾಜ್ಯಮಟ್ಟದ ಸಭೆ ಕರೆಯಲಾಗುತ್ತಿದೆ. ಮುಂದಿನ ವಾರ ಅರಣ್ಯ ಸಚಿವೆ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ವಿಶಿಷ್ಟ ಸಭೆ ನಡೆಸುತ್ತೇನೆ. ರೈಲ್ವೆ ಬ್ಯಾರಿಕೇಡ್ ಎಲ್ಲೆಡೆ ನಿರ್ಮಾಣವಾಗಿಲ್ಲ, ಹಿಂದಿನ ಬಿಜೆಪಿ ಸರ್ಕಾರ ಅದನ್ನು ನಿಲ್ಲಿಸಿತ್ತು. ಈಗ ನಾವು ಅದನ್ನು ಪುನರಾರಂಭಿಸುತ್ತೇವೆ. ಕಾಡಿನಲ್ಲಿ ಅಳವಡಿಸಲಾದ ತಂತಿ ಬೇಲಿಗಳು ಪರಿಣಾಮಕಾರಿಯಾಗಿಲ್ಲ, ಆನೆಗಳು ಅವುಗಳನ್ನು ತುಳಿದು ಹೋಗುತ್ತಿವೆ. ಆದ್ದರಿಂದ ಒಂದು ವರ್ಷದೊಳಗೆ ಅಗತ್ಯ ಸ್ಥಳಗಳಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಜೊತೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಸೇರಿ ಎಲ್ಲ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಲಾಗುವುದು ಎಂದು ಹೇಳಿದರು. ಪ್ರಾಣಿಗಳು ಕಾಡಿನಿಂದ ಹೊರಬರದಂತೆ ಕಾವಲು ವ್ಯವಸ್ಥೆಯನ್ನು ಬಲಪಡಿಸಲಾಗುವುದು ಎಂದರು.
ಮುಖ್ಯಮಂತ್ರಿಗಳು ಮೈಸೂರಿನಲ್ಲಿ ಕೆಡಿಪಿ ಸಭೆ ನಡೆಸಿದ ಸಂದರ್ಭದಲ್ಲೂ ಅಧಿಕಾರಿಗಳ ಕಾರ್ಯನೈಪುಣ್ಯ ಕುರಿತು ಕಿಡಿಕಾರಿದರು. ಆರು ತಿಂಗಳ ಬಳಿಕ ನಡೆದ ಈ ಸಭೆಯಲ್ಲಿ ಅವರು ಸುಮಾರು ಹತ್ತು ಗಂಟೆಗಳ ಕಾಲ ಅಧಿಕಾರಿಗಳೊಂದಿಗೆ ನಿರಂತರ ಚರ್ಚೆ ನಡೆಸಿದರು. ನಾನು ಬೆಂಗಳೂರಲ್ಲಿರಲಿ ಅಥವಾ ಬೇರೆಡೆ ಇರಲಿ, ನೂರಾರು ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ಬರುತ್ತಾರೆ. ಹೆಚ್ಚಿನ ಸಮಸ್ಯೆಗಳು ಸ್ಥಳೀಯ ಮಟ್ಟದಲ್ಲೇ ಇತ್ಯರ್ಥವಾಗಬಹುದು. ಅಧಿಕಾರಿಗಳು ಜನರನ್ನು ಭೇಟಿ ಮಾಡಿ ಅವರ ಅಹವಾಲುಗಳನ್ನು ಆಲಿಸಬೇಕು, ಕಚೇರಿಯಲ್ಲಿ ಇರದೇ ಜನರನ್ನು ಅಲೆಮಾರುವಂತ ಮಾಡಬಾರದು. ಜನರೇ ಪ್ರಜಾಪ್ರಭುತ್ವದಲ್ಲಿ ಪ್ರಭುಗಳು, ಅವರ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ದೊಡ್ಡ ತಪ್ಪು ಎಂದು ಅವರು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿಗಳ ಈ ಹೇಳಿಕೆಗಳ ನಂತರ ಮೈಸೂರು ಜಿಲ್ಲಾಡಳಿತದೊಳಗೆ ಚಟುವಟಿಕೆ ಹೆಚ್ಚಾಗಿದ್ದು, ಅರಣ್ಯ, ಕೃಷಿ ಮತ್ತು ತಹಸೀಲ್ದಾರ್ ಕಚೇರಿಗಳಲ್ಲಿ ಶಿಸ್ತು ಕ್ರಮದ ಚರ್ಚೆ ಚುರುಕಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

