ಮೈಸೂರು ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಈಗ ಹೊಸ ಅನುಭವವನ್ನು ನೀಡುವ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಮೃಗಾಲಯ ನೋಡಲು ಕನಿಷ್ಠ 4 ರಿಂದ 5 ಕಿಲೋಮೀಟರ್ ಕಾಲ್ನಡಿಗೆಯ ಮೂಲಕ ಸುತ್ತಾಡಬೇಕಾಗುತ್ತದೆ. ವಯಸ್ಸಾದವರು ಅಥವಾ ಹೆಚ್ಚು ಸಮಯ ನಡೆದುಬರಲು ಆಗದವರಿಗೆ ಈಗಾಗಲೇ ಎಲೆಕ್ಟ್ರಿಕ್ ಬಗ್ಗಿ ಸೌಲಭ್ಯವಿದೆ. ಆದರೆ ಏಕಾಂತವಾಗಿ, ಸ್ವಂತವಾಗಿ ಮೃಗಾಲಯದ ಸುತ್ತಾಟವನ್ನು ಮಾಡಲು ಬಯಸುವ ಪ್ರವಾಸಿಗರಿಗೆ ಇದೀಗ ಮೃಗಾಲಯದಿಂದ ಹೊಸ ಗಿಫ್ಟ್—ಎಲೆಕ್ಟ್ರಿಕ್ ಸೈಕಲ್ ಸೇವೆ.
ಕಳೆದ ಒಂದು ವಾರದಿಂದ ಕಬ್ಬನ್ ಪಾರ್ಕ್ನಲ್ಲಿ ಕಾರ್ಯನಿರ್ವಹಿಸುವ ಎಲೆಕ್ಟ್ರಿಕ್ ಸೈಕಲ್ ಕಂಪನಿಯ ಸಹಕಾರದಲ್ಲಿ ಮೃಗಾಲಯದಲ್ಲಿ ಪ್ರಾಯೋಗಿಕವಾಗಿ 8 ಎಲೆಕ್ಟ್ರಿಕ್ ಸೈಕಲ್ಗಳನ್ನು ಪರಿಚಯಿಸಲಾಗಿದೆ. ಮೃಗಾಲಯಕ್ಕೆ ಬರುವ ಪ್ರವಾಸಿಗರು ಈಗ ಸ್ವತಃ ಸೈಕಲ್ ಓಡಿಸಿಕೊಂಡು ಮೃಗಾಲಯವನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಬಹುದು. ಇದರಿಂದ ಪ್ರವಾಸಿಗರಿಗೆ ಸ್ವಂತ ವೇಗದಲ್ಲಿ, ತಮ್ಮ ಇಷ್ಟದ ರೀತಿಯಲ್ಲಿ ಮೃಗಾಲಯ ಸುತ್ತಾಡುವ ಅನುಭವ ಸಿಗಲಿದೆ.
ಇತ್ತೀಚೆಗೆ ಪರಿಚಯಿಸಿರುವ ಎಲೆಕ್ಟ್ರಿಕ್ ಸೈಕಲ್ಗಾಗಿ ಶುಲ್ಕವನ್ನು 240 ರೂ ಎಂದು ನಿಗದಿ ಮಾಡಲಾಗಿದೆ. ಈಗಾಗಲೇ ಇರುವ ಎಲೆಕ್ಟ್ರಿಕ್ ಬಗ್ಗಿಗೆ 200 ರೂ ದರ ಇರಲಿದೆ. ಅದರಲ್ಲಿ ಒಂದೇ ಬಾರಿ 5-6 ಮಂದಿ ಸೇರಿ ಪ್ರಯಾಣಿಸುವ ವ್ಯವಸ್ಥೆ. ಆದರೆ ಹೊಸ ಎಲೆಕ್ಟ್ರಿಕ್ ಸೈಕಲ್ನಲ್ಲಿ ಮಾತ್ರ ಒಬ್ಬರೇ ಸ್ವತಂತ್ರವಾಗಿ ಮೃಗಾಲಯ ವೀಕ್ಷಣೆ ಮಾಡಲು ಅವಕಾಶ.
ಪ್ರಾಯೋಗಿಕವಾಗಿ ಸೇವೆ ಪ್ರಾರಂಭಿಸಿರುವುದರಿಂದ ಮೃಗಾಲಯ ಇನ್ನೂ ಸ್ವತಃ ಸೈಕಲ್ಗಳನ್ನು ಖರೀದಿ ಮಾಡಿಲ್ಲ. ಪ್ರವಾಸಿಗರ ಪ್ರತಿಕ್ರಿಯೆ ಹೇಗಿದೆ ಎಂಬುದರ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಮೃಗಾಲಯಕ್ಕೆ ಹೆಚ್ಚಿನ ಎಲೆಕ್ಟ್ರಿಕ್ ಸೈಕಲ್ಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಈಗಾಗಲೇ ಈ ಸೇವೆಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಪ್ರವಾಸಿಗರು ಸೈಕಲ್ ಬಾಡಿಗೆ ಪಡೆದುಕೊಂಡು ಮೃಗಾಲಯವನ್ನು ಹೊಸ ರೀತಿಯಲ್ಲಿ ಅನುಭವಿಸುತ್ತಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




