ಮೈಸೂರಿನ ಚಾಮರಾಜೇಂದ್ರ ಮೃಗಾಲಯದ 71 ವರ್ಷ 2 ತಿಂಗಳು ವಯಸ್ಸಾಗಿದ್ದ, ಹೆಣ್ಣಾನೆ ಪದ್ಮಾವತಿ ಗುರುವಾರ ಮೃತಪಟ್ಟಿದೆ. ಈ ಆನೆಯು ಕಳೆದ ಐದು ದಶಕಗಳಿಗೂ ಹೆಚ್ಚು ಕಾಲದಿಂದ ಮೃಗಾಲಯದ ಅವಿಭಾಜ್ಯ ಅಂಗವಾಗಿತ್ತು. ಪ್ರವಾಸಿಗರ ಪ್ರೀತಿಗೆ ಪಾತ್ರವಾಗಿತ್ತು.
ಅಂದಾಜು 1953-54ರಲ್ಲಿ ಜನಿಸದ್ದ ಪದ್ಮಾವತಿಯನ್ನು, 1973ರಲ್ಲಿ ಖೆಡ್ಡಾ ಕಾರ್ಯಾಚರಣೆಯ ಸಮಯದಲ್ಲಿ ರಕ್ಷಿಸಲಾಗಿತ್ತು. ಈ ಆನೆ ಮೈಸೂರು ಮೃಗಾಲಯದ ಇತಿಹಾಸದಲ್ಲಿಯೇ ಅತ್ಯಂತ ಹಿರಿಯ ಆನೆಯಾಗಿತ್ತು. 53 ವರ್ಷ ಮೃಗಾಲಯದ ಆರೈಕೆಯಲ್ಲಿತ್ತು. ಈ ಆನೆಯು 1979ರಲ್ಲಿ ಪ್ರಸ್ತುತ ಮೈಸೂರು ಮೃಗಾಲಯದಲ್ಲಿರುವ ಗಜಲಕ್ಷ್ಮಿ, 1996ರಲ್ಲಿ ಕೋಮಲಾ ಹಾಗೂ 2004ರಲ್ಲಿ ಅಭಿಮನ್ಯುಗೆ ಜನ್ಮ ನೀಡಿತ್ತು.
ಮೃಗಾಲಯದಲ್ಲಿ ಇರುವವರೆಗೂ ವೀಕ್ಷಕರು, ವನ್ಯಜೀವಿ ಪ್ರಿಯರು ಹಾಗೂ ಸಿಬ್ಬಂದಿಯ ಪ್ರೀತಿಗೆ ಪಾತ್ರವಾಗಿತ್ತು. ವಯೋಸಹಜ ಕಾರಣದಿಂದಾಗಿ ಈ ಆನೆಗೆ ಶಾಂತಿಯುತ ವಾತಾವರಣ ಒದಗಿಸಲು ನಾಲ್ಕು ವರ್ಷಗಳ ಹಿಂದೆ ಅದನ್ನು ಮೈಸೂರು ಮೃಗಾಲಯದ ಕೂರ್ಗಳ್ಳಿ ಹೊರವಲಯದಲ್ಲಿರುವ ಚಾಮುಂಡಿ ವನ್ಯಜೀವಿ ಸಂರಕ್ಷಣೆ ಹಾಗೂ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಆನೆಯು ಮೃಗಾಲಯದ ವೀಕ್ಷಕರಿಂದ ದೂರವಿದ್ದು, ನೈಸರ್ಗಿಕ ವಾತಾವರಣದಲ್ಲಿತ್ತು.
ಇನ್ನು ಬುಧವಾರದವರೆಗೂ ಪದ್ಮಾವತಿ ಆನೆಯ ಆರೋಗ್ಯ ಸ್ಥಿರವಾಗಿತ್ತು. ಗುರುವಾರ ಬೆಳಿಗ್ಗೆ ಮೇಲೇಳಲು ಸಾಧ್ಯವಾಗದೆ ಮಲಗಿದ್ದ ಸ್ಥಿತಿಯಲ್ಲೇ ಇತ್ತು. ಮೃಗಾಲಯದ ಪಶುವೈದ್ಯರ ತಂಡವು ತೀವ್ರ ವೈದ್ಯಕೀಯ ಪರೀಕ್ಷೆ ಹಾಗೂ ಸಹಾಯಕ ಚಿಕಿತ್ಸೆ ನೀಡಲಾರಂಭಿಸಿತ್ತು. ಈಗಾಗಲೇ ಸಾವಿನ ನಿಖರವಾದ ಕಾರಣ ತಿಳಿಯಲು ಸದ್ಯದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ತಿಳಿದು ಬಂದಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ