BBM ವಿದ್ಯಾರ್ಥಿನಿ ನಿಗೂಢ ಸಾವು : ಗೆಳತಿಯ ರೂಮ್‌ನಲ್ಲಿ ಏನಾಯ್ತು?

ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ಯುವತಿಯೊಬ್ಬಳು ಹತ್ಯೆಯಾಗಿರುವ ಭೀಕರ ಘಟನೆ ನಡೆದಿದೆ. ಸ್ನೇಹಿತೆಯ ರೂಂಗೆ ಕರೆದುಕೊಂಡು ಹೋದ ಯುವಕನೇ ಕೊಲೆಗೈದಿದ್ದಾನೆ ಎನ್ನಲಾಗಿದೆ.

ಮೃತ ಯುವತಿ 21 ವರ್ಷದ ದೇವಿಶ್ರೀ, ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಬಿಕ್ಕಿಂವರೀಪಲ್ಲಿ ಗ್ರಾಮದ ನಿವಾಸಿ. ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದಳು. ಭಾನುವಾರ ಬೆಳಗ್ಗೆ ಪ್ರೇಮ್ ವರ್ಧನ್ ಎಂಬಾತನೊಂದಿಗೆ ಸ್ನೇಹಿತೆಯ ರೂಂಗೆ ತೆರಳಿದ್ದ ದೇವಿಶ್ರೀ, ಅಲ್ಲಿ ಕೊಲೆಯಾದರೆಂದು ಶಂಕಿಸಲಾಗಿದೆ. ಯುವಕ ಮಾತ್ರ ಒಬ್ಬನೇ ವಾಪಸ್ ಆಗಿದ್ದು, ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ದೇವಿಶ್ರೀ, ರೆಡ್ಡಪ್ಪ ಮತ್ತು ಜಗದಂಭ ದಂಪತಿಯ ಕಿರಿಯ ಮಗಳು. ಉತ್ತಮ ಶಿಕ್ಷಣಕ್ಕಾಗಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಸೇರಿಸಿದ್ದರು. ಪ್ರಕರಣದ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಪ್ರೇಮ್ ವರ್ಧನ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ದೇವಿಶ್ರೀಯ ದೊಡ್ಡಮ್ಮ ಪ್ರತಿಕ್ರಿಯಿಸಿದ್ದು, ಮಗಳು ಓದಲು ಬಂದಿದ್ದಳು. ಭಾನುವಾರ ಬೆಳಗ್ಗೆ 11 ಗಂಟೆಗೆ ತಂದೆಯೊಂದಿಗೆ ಮಾತಾಡಿದ್ದಳು. ನಂತರ ಕರೆ ಮಾಡಿದ್ರೂ ಪಿಕ್ ಮಾಡಲಿಲ್ಲ. ಸ್ನೇಹಿತೆ ಹೇಳಿದ್ಲು ಅಂತಾ ರೂಂಗೆ ಹೋಗಿದ್ದಾಳೆ. ಅಲ್ಲಿ ಏನಾಯಿತೋ ಗೊತ್ತಿಲ್ಲ. ನಮ್ಮ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಅದೇ ರೀತಿ ದೇವಿಶ್ರೀ ದೊಡ್ಡಪ್ಪ ಕೂಡ ಮಾತನಾಡಿ, ಯುವಕರ‍ರ್ಯಾಗಿಂಗ್ ಮತ್ತು ಉಪಟಳ ಕೊಡುತ್ತಿದ್ದ ಬಗ್ಗೆ, ದೇವಿಶ್ರೀ ಕಾಲೇಜಿಗೆ ಮತ್ತು ಪೋಷಕರಿಗೂ ತಿಳಿಸಿದ್ದಳು. 3 ತಿಂಗಳ ಹಿಂದೆ ಇದರ ಬಗ್ಗೆ ಮಾಹಿತಿ ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನೂ ಮೂರು ತಿಂಗಳಲ್ಲಿ ಕೋರ್ಸ್ ಮುಗಿಯುತ್ತದೆ ಎಂದು ಪೋಷಕರು ಸಮಾಧಾನಪಡಿಸಿದ್ದರು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author