ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿನ ಸರಣಿ ಮುಂದುವರಿಯುತ್ತಿದ್ದು, ಮೃತ ಮೃಗಗಳ ಸಂಖ್ಯೆ ಈಗ 29ಕ್ಕೆ ಏರಿದೆ. ಇಂದು ಮತ್ತೊಂದು ಕೃಷ್ಣಮೃಗ ಮೃತಪಟ್ಟಿದ್ದು, ಸಾವಿನ ಕಾರಣಕ್ಕೆ ಸಂಬಂಧಿಸಿದ ಲ್ಯಾಬ್ ವರದಿ ಮಂಗಳವಾರ ಬರಲಿರುವ ನಿರೀಕ್ಷೆಯಿದೆ. ಗಳಲೆ ರೋಗದಿಂದ ಸೋಂಕು ತಗುಲಿ ಸಾವಿನ ಸಂಭವ ಇದೆ ಎಂಬ ಶಂಕೆ ಮುಂದುವರಿದಿದೆ.
ಕೃಷ್ಣ ಮೃಗಗಳ ಸಾವಿನ ಘಟನೆಗಳು ಕಳೆದ ಮೂರು ದಿನಗಳಿಂದ ಗಂಭೀರ ರೂಪ ಪಡೆದಿವೆ. ನವೆಂಬರ್ 13ರಂದು 8 ಕೃಷ್ಣಮೃಗಗಳು ಮೃತವಾಗಿದ್ದರೆ, ನಿನ್ನೆ ಒಂದೇ ದಿನ 20 ಮೃಗಗಳು ಸಾವನ್ನಪ್ಪಿದ್ದವು. ಮೃತ ಮೃಗಗಳ ಸಂಬಂಧ ಕಿರು ಮೃಗಾಲಯದ ವೈದ್ಯರಾದ ಡಾ. ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.
ಮೃತ ಮೃಗಗಳ ಕಿಡ್ನಿ, ಹೃದಯ, ಲಿವರ್ ಮತ್ತು ರಕ್ತದ ಮಾದರಿಗಳನ್ನು ಸ್ಯಾಂಪಲ್ ರೂಪದಲ್ಲಿ ಲ್ಯಾಬ್ಗೆ ಕಳುಹಿಸಿದ್ದೇವೆ. ಮಂಗಳವಾರಕ್ಕೆ ವರದಿ ಬರಲಿದೆ. ನಂತರ ಅದನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಸಲ್ಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃಗಾಲಯಗಳ ಸದಸ್ಯ ಕಾರ್ಯದರ್ಶಿ ಸುನೀಲ್ ಮಾಹಿತಿ ನೀಡಿದ್ದು, ಗಳಲೆ ರೋಗದಿಂದ ಸಾವಿನ ಶಂಕೆ ಇದೆ. ಇಂದು ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿ ಮೃಗಾಲಯವನ್ನು ಪರಿಶೀಲಿಸಿದೆ. ಸಿಬ್ಬಂದಿ ನಿರ್ಲಕ್ಷ್ಯದ ಯಾವುದೇ ಸುಳಿವು ಕಂಡುಬಂದಿಲ್ಲ. ಮೊದಲ 8 ಮೃಗಗಳು ಮೃತಪಟ್ಟಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಆದರೆ, ತನಿಖೆಯಲ್ಲಿ ಸಿಬ್ಬಂದಿಯಿಂದ ತಪ್ಪು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈ ನಡುವೆ ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿನ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಇಲಾಖೆಯ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದರೇ? ಎಂಬ ಅನುಮಾನವೂ ವ್ಯಕ್ತವಾಗಿದೆ. ಅಧಿಕಾರಿಗಳು ಪ್ರಾರಂಭದಲ್ಲಿ ಆಹಾರ ಸಮಸ್ಯೆಯಿಂದ ಸಾವಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳಿಗೆ ಬ್ಯಾಕ್ಟೀರಿಯಾ ಇನ್ಫೆಕ್ಷನ್ ಕಾರಣ ಎಂದು ತಿಳಿಸಿದ್ದಾರೆ. ಲ್ಯಾಬ್ ವರದಿ ಇನ್ನೂ ಬಾರದಿರುವ ಸಂದರ್ಭದಲ್ಲಿ ಇಂತಹ ಮಾಹಿತಿ ಬದಲಾಗಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸ್ಯಾಂಪಲ್ಗಳನ್ನು ಈಗಾಗಲೇ FSL ಗೂ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ

