ನಾರ್ವೆ: ಇಡೀ ಜಗತ್ತಿನ ಗಮನವನ್ನು ಸೆಳೆದಿದ್ದ ರಷ್ಯಾದ ಬೇಹುಗಾರ ತಿಮಿಂಗಿಲ ಇದೀಗ ನಾರ್ವೆ ಕರಾವಳಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದೆ. ರಷ್ಯನ್ ಸ್ಪೈ ತಿಮಿಂಗಿಲ (Russian Spy Whale) ಅಂತಾನೇ ಫೇಮಸ್ ಆಗಿದ್ದ ಹ್ವಾಲ್ಡಿಮಿರ್ (Hvaldimir) ತಿಮಿಂಗಿಲದ ಮೃತದೇಹವು ದಕ್ಷಿಣ ನಾರ್ವೆಯ ರಿಜವಿಕಾ ಕೊಲ್ಲಿಯಲ್ಲಿ ನೀರಿನ ಮೇಲೆ ಪತ್ತೆಯಾಗಿದ್ದು, ಕ್ರೇನ್ ಸಹಾಯದಿಂದ ತಿಮಿಂಗಿಲ ದೇಹವನ್ನು ಹೊರಕ್ಕೆ ತೆಗೆಯಲಾಗಿದೆ ಅಂತ ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.
ಈ ತಿಮಿಂಗಿಲ 14 ಅಡಿ ಉದ್ದ ಹಾಗೂ 2 ಸಾವಿರದ 700 ಪೌಂಡ್ ತೂಕವಿದೆ ಎಂದು ಹೇಳಲಾಗಿದೆ. ಇದು ರಷ್ಯನ್ ಸ್ಪೈ ತಿಮಿಂಗಲ ಅಂತಾನೇ ನಂಬಿದ್ದ ಹಲವು ರಾಷ್ಟ್ರಗಳು ಇದಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (
Vladimir Putin) ಹೆಸರು ಸೇರಿಸಿ ಹ್ವಾಲ್ಡಿಮಿರ್ (Hvaldimir) ಅಂತ ಹೆಸರಿಟ್ಟಿದ್ದಾರೆ. ವರದಿಗಳ ಪ್ರಕಾರ ರಷ್ಯಾದ ಈ ಬೇಹುಗಾರ ತಿಮಿಂಗಿಲದ ದೇಹದಲ್ಲಿ ಕ್ಯಾಮೆರಾಗಳು ಮತ್ತು ಇನ್ನಿತರ ಉಪಕರಣಗಳನ್ನು ಅಳವಡಿಸಲಾಗಿದೆ. ಆ ಮೂಲಕ ಯಾವುದೇ ಪ್ರದೇಶದ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆಯಬಹುದು. ಅಲ್ಲದೆ, ಈ ತಿಮಿಂಗಿಲದಿಂದ ಸಮುದ್ರದ ಆಳದಲ್ಲಿ ನಡೆಯುವ ಘಟನೆಗಳ ಚಲನವಲನವನ್ನು ಸಹ ಸೆರೆ ಹಿಡಿಯಲಾಗುತ್ತಿದೆ ಎಂಬ ಆರೋಪಗಳಿವೆ. ಈ ಹಿಂದೆ ಓಸ್ಲೋ ಕರಾವಳಿಯ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದ್ವು. ವರದಿಗಳ ಪ್ರಕಾರ ಹ್ವಾಲ್ಡಿಮಿರ್ ತಿಮಿಂಗಿಲ ಓಸ್ಲೋ ಫ್ಜೋರ್ಡ್‌ನ ಜನನಿಬಿಡ ಪ್ರದೇಶದಲ್ಲಿ ಕೊನೆಯದಾಗಿ ಕಂಡುಬಂದಿತ್ತು.
ಹ್ವಾಲ್ಡಿಮಿರ್ ಹೆಸರಿನ ಈ ತಿಮಿಂಗಿಲ ಸಾಧಾರಣ ಜಲಚರವಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವ್ರಿಗೆ ತುಂಬಾನೇ ಪ್ರೀತಿಪಾತ್ರವಾದ ತಿಮಿಂಗಿಲವಾಗಿತ್ತು. ಅನುಮಾನಾಸ್ಪದವಾಗಿ ಮೃತಪಟ್ಟಿರುವ ಹ್ವಾಲ್ಡಿಮಿರ್ ತಿಮಿಂಗಿಲ ಮನುಷ್ಯರ ಜೊತೆ ತುಂಬಾ ಆತ್ಮೀಯವಾಗಿ ವರ್ತಿಸುತ್ತಿತ್ತು. 2019ರಲ್ಲಿ ಸೆಂಟ್ ಪೀಟರ್ಸ್ಬರ್ಗ್ ಸಲಕರಣೆ ಎಂಬ ಲೆಬಲ್ನೊಂದಿಗೆ ಹ್ವಾಲ್ಡಿಮಿರ್ ಹೆಸರಿನ ತಿಮಿಂಗಿಲ ಮೊದಲ ಬಾರಿ ನಾರ್ವೆಯಲ್ಲಿ ಪತ್ತೆಯಾಗಿತ್ತು.
ಪ್ರಾಣಿಗಳನ್ನು ಗೂಢಚಾರರನ್ನಾಗಿ ಮಾಡುವ ರಷ್ಯಾದ ಯೋಜನೆಯ ಭಾಗವಾಗಿ ಹ್ವಾಲ್ಡಿಮಿರ್ ತಿಮಿಂಗಿಲ ರಷ್ಯಾದ ಸ್ಪೈ ಆಗಿ ಕಾರ್ಯ ನಿರ್ವಹಿಸುತ್ತಿತ್ತು ಎಂದು ಹೇಳಲಾಗುತ್ತಿದೆ. ಆದರೆ ರಷ್ಯಾ ಮಾತ್ರ ಇಂದಿಗೂ ಆ ಸತ್ಯವನ್ನು ಬಹಿರಂಗವಾಗಿ ಒಪ್ಪಿಕೊಂಡಿಲ್ಲ. ಹ್ವಾಲ್ಡಿಮಿರ್ ತಿಮಿಂಗಿಲದ ಸಾವು ಸಹಜನಾ..? ಇಲ್ಲ ಕೊಲೆನಾ..? ಎಂಬ ಚರ್ಚೆ ಸದ್ಯ ಎಲ್ಲೆಡೆ ಜೋರಾಗಿಯೇ ನಡೆಯುತ್ತಿದೆ.