ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದ ಮಧ್ಯೆ, ರಾಜ್ಯ ಕಾಂಗ್ರೆಸ್‌ನಲ್ಲಿ “ಡಿನ್ನರ್ ಪಾಲಿಟಿಕ್ಸ್” ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರು ಬಳಿಕ ಇದೀಗ ಬೆಳಗಾವಿಯಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಪ್ರಮುಖ ನಾಯಕರು ಸೇರಿಕೊಂಡಿರುವ ”ಡಿನ್ನರ್ ಮೀಟಿಂಗ್” ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಅಹಿಂದ ಶಕ್ತಿ ಕೇಂದ್ರ ಎಂದು ಪರಿಗಣಿಸಲಾದ ಈ ನಾಯಕರ ಹಾಜರಾತಿ ರಾಜಕೀಯ ನಿರೀಕ್ಷೆಗಳನ್ನು ತೀವ್ರಗೊಳಿಸಿದೆ. ಬೆಳಗಾವಿಯ ಜಾಧವ್ ನಗರದಲ್ಲಿ ಮಾಜಿ ಶಾಸಕ ಫಿರೋಜ್ ಸೇಠ ಅವರ ನಿವಾಸದಲ್ಲಿ ಬುಧವಾರ ರಾತ್ರಿ ಈ ಡಿನ್ನರ್ ಮೀಟಿಂಗ್ ಏರ್ಪಡಿಸಲಾಗಿತ್ತು.
ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಸಚಿವರಾದ ಸತೀಶ್ ಜಾರಕಿಹೊಳಿ, ಜಮೀ ಅಹ್ಮದ್, ಖನಿಜಾ ಫಾತಿಮಾ, ರಹೀಮ್ ಖಾನ್, ಎಚ್.ಸಿ. ಮಹಾದೇವಪ್ಪ, ಬೈರತಿ ಸುರೇಶ್, ಸಲೀಂ ಅಹ್ಮದ್, ಪ್ರಸಾದ್ ಅಬ್ಬಯ್ಯ, ಆಸೀಫ್ ಸೇರ್, ಅಶೋಕ್ ಪಟ್ಟಣ್ ಅವರಂತ ಪ್ರಮುಖ ನಾಯಕರು ಉಪಸ್ಥಿತರಿದ್ದರು.
ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಡಿನ್ನರ್ ಪಾಲಿಟಿಕ್ಸ್ ಕುರಿತು ಮಾರ್ಮಿಕ ಪ್ರತಿಕ್ರಿಯೆ ನೀಡಿದರು. “ಈ ಬಾರಿ ರಾಜ್ಯದಲ್ಲಿ ಎಲ್ಲೆಡೆ ರಾಜಕೀಯ ವಾತಾವರಣ ಬಹಳ ಚೆನ್ನಾಗಿದೆ. ಅಧಿವೇಶನದ ಜೊತೆಗೆ ಬೆಳಗಾವಿಯ ರಾಜಕೀಯ ಚಟುವಟಿಕೆಗಳು ಉತ್ತಮವಾದ ಸಂದೇಶ ನೀಡುತ್ತಿವೆ,” ಎಂದು ಹೇಳಿದ್ದಾರೆ.
ಡಿನ್ನರ್ ಸಭೆಯ ನಿಖರ ಉದ್ದೇಶವೇನು? ಅದು ಅಹಿಂದ ಸಮನ್ವಯ ಸಭೆಯೇ? ಅಥವಾ ಸಂಘಟನೆಗೆ ಸಂಬಂಧಿಸಿದ ಸ್ಟ್ರಾಟಜಿಯೇ? ಎಂಬ ಪ್ರಶ್ನೆಗಳು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ.
ವರದಿ : ಲಾವಣ್ಯ ಅನಿಗೋಳ




