ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಸಾಮೂಹಿಕ ನಮಾಜ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ನಮಾಜ್ ವಿಡಿಯೋ ಪೋಸ್ಟ್ ಮಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಇದನ್ನು ಒಪ್ಪುತ್ತಾರೆಯೇ ಎಂದು, ಕರ್ನಾಟಕ ಬಿಜೆಪಿ ವಕ್ತಾರ ವಿಜಯ್ ಪ್ರಸಾದ್ ಪ್ರಶ್ನಿಸಿದ್ದಾರೆ.
ಈ ವ್ಯಕ್ತಿಗಳು ಅತಿ ಹೆಚ್ಚಿನ ಭದ್ರತೆ ಇರುವ ವಿಮಾನ ನಿಲ್ದಾಣದಲ್ಲಿ ನಮಾಜ್ ಮಾಡಲು ಪೂರ್ವಾನುಮತಿ ಪಡೆದಿದ್ದಾರೆಯೇ? ಸಂಬಂಧಿತ ಅಧಿಕಾರಿಗಳಿಂದ ಸೂಕ್ತ ಅನುಮತಿ ಪಡೆದ ನಂತರ, ಆರ್‌ಎಸ್‌ಎಸ್ ಪಥ ಸಂಚಲನ ನಡೆಸಿದಾಗಲೂ ಆಕ್ಷೇಪಿಸುವ ಸರ್ಕಾರ, ನಿರ್ಬಂಧಿತ ಸಾರ್ವಜನಿಕ ಪ್ರದೇಶದಲ್ಲಿ ನಮಾಜ್ ಮಾಡಿದಂಥ ಚಟುವಟಿಕೆಗಳನ್ನು ಏಕೆ ನಿರ್ಲಕ್ಷಿಸುತ್ತದೆ. ಇದು ಸೂಕ್ಷ್ಮ ವಲಯದಲ್ಲಿ ಗಂಭೀರ ಭದ್ರತಾ ಕಳವಳ ಉಂಟು ಮಾಡುವುದಿಲ್ಲವೇ ಎಂದು ವಿಜಯ್ ಪ್ರಸಾದ್ ಪ್ರಶ್ನಿಸಿದ್ದಾರೆ.
ಟರ್ಮಿನಲ್-2ರಲ್ಲಿ ಸಾಮೂಹಿಕ ನಮಾಜ್ ಮಾಡಿರುವುದಕ್ಕೆ ಸಂಬಂಧಿಸಿದ ವಿಡಿಯೋ ಹರಿದಾಡುತ್ತಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಜ್ ಯಾತ್ರಿಕರನ್ನು ಬೀಳ್ಕೊಡಲು ಬಂದಿದ್ದ ಕೆಲವರು, ವಿಮಾನ ನಿಲ್ದಾಣದ ಟರ್ಮಿನಲ್ ಒಳಭಾಗದಲ್ಲೇ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಏರ್ಪೋರ್ಟ್ ಒಳಭಾಗದಲ್ಲಿ ಪ್ರಯಾಣಿಕರಿಗೆ ಪ್ರಾರ್ಥನಾ ಕೊಠಡಿಯಿದ್ದರೂ ಹೊರಗಡೆ ನಮಾಜ್ ಮಾಡಿದ್ದು ಏಕೆ?. ಸಾಮೂಹಿಕ ನಮಾಜ್ ನಡೆಯುತ್ತಿದ್ದರೂ ಸಿಬ್ಬಂದಿ ನೋಡುತ್ತಾ ಮೌನವಾಗಿದ್ದರು ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಹೆಚ್ಚಿನ ಮಾಹಿತಿ ತಿಳಿದುಕೊಂಡು ಕ್ರಮ ಕೈಗೊಳ್ಳಲಾಗುವುದಾಗಿ ಹೇಳಿದ್ದಾರೆ.

