ಮಾಲೂರಿನ ಮರು ಮತಎಣಿಕೆಯಲ್ಲಿ ಬಿಜೆಪಿ ಗೆದ್ರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ, ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಸವಾಲು ಹಾಕಿದ್ದಾರೆ. ಹೈಕೋರ್ಟ್ ಆದೇಶದಂತೆ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಮರು ಮತ ಎಣಿಕೆ ನಡೆಯಲಿದೆ. ಒಂದು ವೇಳೆ ಬಿಜೆಪಿ ಅಭ್ಯರ್ಥಿ ಕೆ.ಎಸ್. ಮಂಜುನಾಥಗೌಡ ಗೆಲುವು ಸಾಧಿಸಿದ್ರೆ, ರಾಜಕೀಯ ನಿವೃತ್ತಿ ಸ್ವೀಕರಿಸುತ್ತೇನೆ. ಮರು ಮತ ಎಣಿಕೆಯ ಹೈಕೋರ್ಟ್ ಆದೇಶಕ್ಕೆ, ನನ್ನದೇನು ಅಭ್ಯಂತರವಿಲ್ಲ. ಆದರೆ, ಮತ ಎಣಿಕೆ ಪ್ರಕ್ರಿಯೆಯನ್ನೇ ಅಸಿಂಧುಗೊಳಿಸಿರುವುದಕ್ಕೆ ಬೇಸರವಿದೆ. ಮತ್ತೊಮ್ಮೆ ಮತ ಎಣಿಕೆ ನಡೆದರೂ ಗೆಲ್ಲುವುದು ನಾನೇ. ಹೀಗಂತ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಜುನಾಥಗೌಡರನ್ನು ನಾನೇ ಹೊಸಕೋಟೆಯಿಂದ ಕರೆತಂದು, ಮಾಲೂರು ಕ್ಷೇತ್ರದಿಂದ ಗೆಲ್ಲಿಸಿಕೊಂಡು ಬಂದಿದ್ದೆ. ಆದರೆ, ನಾನು ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ, ಆತನಿಗೆ ಹುಚ್ಚು ಹಿಡಿದಿದೆ. ಶಾಸಕನಾಗುವ ಭ್ರಮೆಯಲ್ಲಿದ್ದಾನೆ. ಮರು ಮತ ಎಣಿಕೆ ನಡೆಯಲಿ ಅಥವಾ ಹೊಸದಾಗಿ ಚುನಾವಣೆ ನಡೆಯಲಿ. ಮಂಜುನಾಥಗೌಡನಿಗೆ ಸೋಲು ಕಟ್ಟಿಟ್ಟ ಬುತ್ತಿ. ಹೈಕೋರ್ಟ್ ನನ್ನ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿದೆ. ಹೀಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗುತ್ತಿದ್ದು, ಇಡೀ ಆದೇಶದ ಮೇಲೆ ಮೇಲ್ಮನವಿ ಸಲ್ಲಿಸುವುದಾಗಿ, ನಂಜೇಗೌಡ ಹೇಳಿದ್ರು.
ಮತಗಳ್ಳತನ ನಡೆದಿದ್ರೆ ಏಕೆ ತಡೆಯಲಿಲ್ಲ? ಚುನಾವಣಾ ಫಲಿತಾಂಶದ ದಿನ ನಾನು ಮನೆಯಲ್ಲೇ ಟಿ.ವಿ. ನೋಡುತ್ತಾ ಕುಳಿತಿದ್ದೆ. ಫಲಿತಾಂಶ ಘೋಷಣೆ ವೇಳೆ, ಮತಗಟ್ಟೆ ಬಳಿ ಬಂದಿದ್ದೆ. ಫಲಿತಾಂಶಕ್ಕೆ ಆತ ಆಕ್ಷೇಪ ವ್ಯಕ್ತಪಡಿಸಿದಾಗ, ಜಿಲ್ಲಾ ಚುನಾವಣಾಧಿಕಾರಿಗಳು ಲಾಟರಿ ಮೂಲಕ ಇವಿಎಂ ಹಾಗೂ ವಿ.ವಿ. ಪ್ಯಾಟ್‌ಗಳನ್ನು ತಾಳೆ ಮಾಡಿ ನೋಡಿದ್ರು. ಫಲಿತಾಂಶ ಸರಿಯಾಗಿ ಬಂದ ಹಿನ್ನೆಲೆ ಗೆದ್ದಿರುವುದಾಗಿ ಘೋಷಿಸಿದ್ದರು. ಆದರೀಗ ಏನೇನೋ ಮಾತಾಡ್ತಿದ್ದಾರೆಂದು, ಶಾಸಕ ನಂಜೇಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ.