ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಆತ್ಮೀಯ ಸ್ನೇಹ ಮತ್ತೊಮ್ಮೆ ಹೊರಹೊಮ್ಮಿದೆ. ಜಾರ್ಜಿಯಾ ಮೆಲೋನಿ ಅವರ ಆತ್ಮಕತೆ “ಐ ಆಮ್ ಜಾರ್ಜಿಯಾ: ಮೈ ರೂಟ್ಸ್, ಮೈ ಪ್ರಿನ್ಸಿಪಲ್ಸ್” ಪುಸ್ತಕದ ಭಾರತೀಯ ಆವೃತ್ತಿಗೆ ಪ್ರಧಾನಿ ಮೋದಿ ಮುನ್ನುಡಿ ಬರೆದಿದ್ದಾರೆ. ತಮ್ಮ ಜೀವನ, ಹೋರಾಟ, ನಂಬಿಕೆ ಮತ್ತು ನಾಯಕತ್ವದ ಪಯಣವನ್ನು ವಿವರಿಸುವ ಈ ಕೃತಿ, ಭಾರತದಲ್ಲಿ ರೂಪಾ ಪಬ್ಲಿಕೇಷನ್ಸ್ ಮೂಲಕ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಮೆಲೋನಿಯವರ ಜೀವನ ಪಯಣವು ರಾಜಕೀಯ ಅಥವಾ ಅಧಿಕಾರದ ಬಗ್ಗೆ ಮಾತ್ರವಲ್ಲ, ಅವರ ಧೈರ್ಯ, ದೃಢನಿಶ್ಚಯ, ಸಾರ್ವಜನಿಕ ಸೇವೆ ಮತ್ತು ಇಟಲಿಯ ಜನಪರ ಬದ್ಧತೆಯ ಕುರಿತಾದದ್ದು ಎಂದು ಮೋದಿ ಮುನ್ನುಡಿಯಲ್ಲಿ ತಿಳಿಸಿದ್ದಾರೆ. ಕಳೆದ 11 ವರ್ಷಗಳಲ್ಲಿ ಅನೇಕ ಜಾಗತಿಕ ನಾಯಕರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದರೂ, ಮೆಲೋನಿಯವರ ಪಯಣವು ವೈಯಕ್ತಿಕ ಕಥೆಯನ್ನು ಮೀರಿ ಸಂಸ್ಕೃತಿ ಮತ್ತು ಶತಮಾನಗಳಿಂದ ಉಳಿದುಕೊಂಡು ಬಂದ ಆದರ್ಶಗಳನ್ನು ನೆನಪಿಸುವಂತದ್ದು. ಅವರ ಬದುಕು ಸ್ಪೂರ್ತಿದಾಯಕ ಮತ್ತು ಐತಿಹಾಸಿಕವಾಗಿದೆ ಎಂದಿದ್ದಾರೆ.
ಪ್ರಧಾನಿಯಾಗಿ ಅಧಿಕಾರ ವಹಿಸಿದ ಸಂದರ್ಭದಲ್ಲಿ ಮೆಲೋನಿಯವರ ಬಗ್ಗೆ ಮಾಧ್ಯಮ ಹಾಗೂ ವಿಶ್ಲೇಷಕರು ಶಂಕೆ ವ್ಯಕ್ತಪಡಿಸಿದ್ದರೂ, ಎಲ್ಲ ಸಂದೇಹಗಳನ್ನು ಮೀರಿ ಅವರು ಇಟಲಿಗೆ ಶಕ್ತಿ, ಸ್ಥಿರತೆ ಹಾಗೂ ಜಾಗತಿಕ ಒಳಿತನ್ನು ಒದಗಿಸಿದ ಅದ್ಭುತ ನಾಯಕಿಯಾಗಿ ಹೊರಹೊಮ್ಮಿದ್ದಾರೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಟಲಿಯ ಹಿತಾಸಕ್ತಿಗಳನ್ನು ಧೃಡವಾಗಿ ಪ್ರತಿಪಾದಿಸುತ್ತಾ, ಅಂತಾರಾಷ್ಟ್ರೀಯ ಸವಾಲುಗಳಿಗೆ ಸಮರ್ಪಕವಾಗಿ ಪ್ರತಿಕ್ರಿಯಿಸಿರುವುದನ್ನು ಅವರು ಉಲ್ಲೇಖಿಸಿದ್ದಾರೆ.
ಮೆಲೋನಿಯವರ ಕಥೆ ಮತ್ತು ಭಾರತೀಯ ನಾರಿಶಕ್ತಿ ಪರಿಕಲ್ಪನೆಯ ನಡುವೆ ಗಾಢವಾದ ಸಂಬಂಧವಿದೆ ಎಂದು ಮೋದಿ ತಿಳಿಸಿದ್ದಾರೆ. ಸಾವಿರಾರು ವರ್ಷಗಳಿಂದ ಭಾರತೀಯ ಸಂಪ್ರದಾಯಗಳಲ್ಲಿ ಸ್ತ್ರೀ ಶಕ್ತಿಯನ್ನು ದೈವಿಕ ರೂಪದಲ್ಲಿ ಪೂಜಿಸಿರುವುದನ್ನು ಉಲ್ಲೇಖಿಸಿ, ಮೆಲೋನಿಯವರ ನಾಯಕತ್ವವು ಅದೇ ಶಕ್ತಿಯ ಪ್ರತಿಫಲನೆ ಎಂದು ಬರೆದಿದ್ದಾರೆ. ತಮ್ಮ ರಾಷ್ಟ್ರದ ಬೇರುಗಳಿಗೆ ನಿಷ್ಠೆಯಿಂದ ನಿಂತು, ಜಾಗತಿಕ ವೇದಿಕೆಯಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಸುತ್ತಿರುವ ಮೆಲೋನಿಯವರ ಪಯಣವು ಭಾರತದಲ್ಲಿ ಸಹ ಆಳವಾದ ಪ್ರತಿಧ್ವನಿಯನ್ನು ಮೂಡಿಸುತ್ತದೆ.
ಈ ಆತ್ಮಚರಿತ್ರೆ ಯುರೋಪಿನ ಹಾಗೂ ಜಗತ್ತಿನ ಅತ್ಯಂತ ಚೈತನ್ಯಶೀಲ ನಾಯಕಿಯ ಹೃದಯ ಮತ್ತು ಮನಸ್ಸಿನ ಆಳವಾದ, ಅಪರೂಪದ ನೋಟವನ್ನು ನೀಡುವುದರೊಂದಿಗೆ ಓದುಗರಿಗೆ ಪ್ರಾಮಾಣಿಕ ಹಾಗೂ ವೈಯಕ್ತಿಕ ಅನುಭವವನ್ನು ನೀಡುತ್ತದೆ ಎಂದು ಮೋದಿ ಮುನ್ನುಡಿಯಲ್ಲಿ ಬರೆದಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ