ನಾವು ಪ್ರತಿಕ್ಷಣ ಉಸಿರಾಡುವ ಗಾಳಿ… ಅದು ಎಂದಿಗೂ ಮುಗಿಯಲ್ಲ… ಮುಗಿಯದ ಸಂಪನ್ಮೂಲ… ಖಾಲಿಯಾಗಲ್ಲ ಅನ್ನೋ ಭಾವನೆ ನಮಗಿರುತ್ತೆ. ಆದ್ರೆ… ಆಮ್ಲಜನಕಕ್ಕೂ ಒಂದು Expiry Date ಇದೆ ಅನ್ನೋ ಸತ್ಯ ಈಗ ವಿಜ್ಞಾನಿಗಳಿಂದ ಹೊರಬಿದ್ದಿದೆ. ಹೌದು… ನಾಸಾ ಬೆಂಬಲಿತ ಅಧ್ಯಯನವೊಂದು ಭೂಮಿಯ ಭವಿಷ್ಯಕ್ಕೆ ಸಂಬಂಧಿಸಿದ ಭಯಾನಕ ಎಚ್ಚರಿಕೆ ನೀಡಿದೆ.
ಒಂದು ದಿನ… ಭೂಮಿಯ ಮೇಲೆ ಆಮ್ಲಜನಕವೇ ಸಂಪೂರ್ಣವಾಗಿ ಖಾಲಿಯಾಗುತ್ತಂತೆ. ಆ ದಿನ ಯಾವಾಗ? ಅದಕ್ಕೆ ಕಾರಣ ಏನು? ಯಾರು? ಇದೀಗ ಸಂಪೂರ್ಣ ವರದಿ. ನಾವು ಜೀವಿಸುವ ಈ ಭೂಮಿ, ಇಂದಿನಂತೆ ಆಮ್ಲಜನಕ ಸಮೃದ್ಧವಾಗಿರೋದು ಶಾಶ್ವತವಲ್ಲ. 2021ರಲ್ಲಿ ಪ್ರಕಟವಾದ NASA ಬೆಂಬಲಿತ ವೈಜ್ಞಾನಿಕ ಅಧ್ಯಯನ ಆಮ್ಲಜನಕಕ್ಕೂ ಅಂತ್ಯ ಇದೆ ಅನ್ನೋದನ್ನು ಸ್ಪಷ್ಟಪಡಿಸಿದೆ.
ಈ ಸಂಶೋಧನೆಯನ್ನು ಜಪಾನ್‌ನ ಟೊಹೊ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಜಾರ್ಜಿಯಾ ಟೆಕ್ ವಿಜ್ಞಾನಿಗಳು ನಾಸಾದ NExSS ಕಾರ್ಯಕ್ರಮದ ಅಡಿಯಲ್ಲಿ ನಡೆಸಿದ್ದಾರೆ. ಭೂಮಿಯ ವಾತಾವರಣ ಭವಿಷ್ಯವನ್ನು ಅಂದಾಜಿಸಲು 4 ಲಕ್ಷಕ್ಕೂ ಹೆಚ್ಚು ಕಂಪ್ಯೂಟರ್ ಸಿಮ್ಯುಲೇಶನ್‌ಗಳು ಬಳಸಲಾಗಿದೆ.
ಸಂಶೋಧನೆಯ ಪ್ರಕಾರ, ಭೂಮಿಯ ಇಂದಿನ ಆಮ್ಲಜನಕ-ಸಮೃದ್ಧ ವಾತಾವರಣ ಸುಮಾರು 1.08 ಶತಕೋಟಿ ವರ್ಷಗಳವರೆಗೆ ಮಾತ್ರ ಇರುತ್ತದೆ. ಅದರ ನಂತರ, ಆಮ್ಲಜನಕದ ಮಟ್ಟವು ಅತ್ಯಂತ ವೇಗವಾಗಿ ಕುಸಿಯಲಿದೆ.
ಭೂಮಿಯ ವಾತಾವರಣ ಶತಕೋಟಿ ವರ್ಷಗಳ ಹಿಂದಿನ ಸ್ಥಿತಿಗೆ ಅಂದರೆ Great Oxidation Event ಗೂ ಮುಂಚಿನ ಕಾಲಕ್ಕೆ ಮರಳಲಿದೆ. ಆ ಸಮಯದಲ್ಲಿ ಭೂಮಿಯ ಮೇಲೆ ಸೂಕ್ಷ್ಮಜೀವಿಗಳು ಮಾತ್ರ ಅಸ್ತಿತ್ವದಲ್ಲಿದ್ದವು.
ಕಾರಣವೇನು? ಇಲ್ಲಿ ಗಮನಿಸಬೇಕಾದ ಪ್ರಮುಖ ವಿಷಯ ಏನೆಂದರೆ… ಈ ಆಮ್ಲಜನಕ ನಾಶಕ್ಕೆ ಮಾನವ ಮಾಲಿನ್ಯ ಕಾರಣವಲ್ಲ. ವಿಜ್ಞಾನಿಗಳ ಪ್ರಕಾರ, ಇದಕ್ಕೆ ಮುಖ್ಯ ಕಾರಣ ಹೆಚ್ಚಾಗುತ್ತಿರುವ ಸೂರ್ಯನ ಶಾಖ. ಸೂರ್ಯ ನಿಧಾನವಾಗಿ ಹೆಚ್ಚು ಬಿಸಿಯಾಗುತ್ತಿದ್ದಂತೆ ಭೂಮಿಯ ಇಂಗಾಲದ ಚಕ್ರ ಬದಲಾಗುತ್ತದೆ. ಬಂಡೆಗಳ ಸವೆತ ಹೆಚ್ಚಾಗುತ್ತದೆ. ವಾತಾವರಣದಲ್ಲಿನ ಕಾರ್ಬನ್ ಡೈಆಕ್ಸೈಡ್ ಕಡಿಮೆಯಾಗುತ್ತದೆ
ಮೀಥೇನ್ ಹೆಚ್ಚಾಗುವುದರಿಂದ ಓಝೋನ್ ಪದರವು ಕ್ಷೀಣಿಸುತ್ತದೆ. ಆಮ್ಲಜನಕದ ಮಟ್ಟ ಕಡಿಮೆಯಾದಂತೆ, ವಾತಾವರಣದಲ್ಲಿ ಮೀಥೇನ್ 10,000 ಪಟ್ಟು ಹೆಚ್ಚಾಗಬಹುದು. ಓಝೋನ್ ಪದರದ ಸವಕಳಿಯು ಭೂಮಿಯು UV ಕಿರಣಗಳು ಒಡ್ಡಿಕೊಳ್ಳುವುದರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಸೂಕ್ಷ್ಮಜೀವಿಗಳು ಮರಳುತ್ತವೆ ಮತ್ತು ಮನುಷ್ಯರ ನಾಶ ಭವಿಷ್ಯದ ಈ ಭೂಮಿಯ ಮೇಲೆ, ಆಮ್ಲಜನಕರಹಿತ ಜೀವ ರೂಪಗಳು ಮಾತ್ರ ಉಳಿಯುತ್ತವೆ. ಮಾನವರು, ಪ್ರಾಣಿಗಳು ಮತ್ತು ಸಸ್ಯಗಳು ಸಂಪೂರ್ಣವಾಗಿ ನಾಶವಾಗುತ್ತವೆ.
ವರದಿ : ಲಾವಣ್ಯ ಅನಿಗೋಳ




