ಈಗಾಗಲೇ ನಾಡಹಬ್ಬ ಮೈಸೂರು ದಸರಾ ಆರಂಭವಾಗಿದೆ. ಮೈಸೂರು ಮನೆತನದ ಕುಲದೈವ ಶ್ರೀಚೆಲುವನಾರಾಯಣಸ್ವಾಮಿಯ ಸನ್ನಿಧಿಯಲ್ಲಿ ಮಹಾಲಕ್ಷ್ಮಿಕಲ್ಯಾಣನಾಯಕಿ ದೇವಿಗೆ ನಡೆದ ಬಂಗಾರದ ಶೇಷವಾಹನೋತ್ಸವದೊಂದಿಗೆ ಸೋಮವಾರ ನವರಾತ್ರಿ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗಿದೆ.
ದೇವಿ ಮೂರ್ತಿಯನ್ನು ಅಲಂಕರಿಸಿ ಬಂಗಾರದ ಶೇಷವಾಹನೋತ್ಸವ ಮತ್ತು ಪಲ್ಲಕ್ಕಿ ಉತ್ಸವ ಮೇಲೆಕೋಟೆಯ ರಾಜಬೀದಿಯಲ್ಲಿ ವೈಭವದಿಂದ ಜರುಗಿತು. ನವರಾತ್ರಿ ಅಂಗವಾಗಿ ಪ್ರತಿದಿನ ಬೆಳಿಗ್ಗೆ 6.30ಕ್ಕೆ ನಿತ್ಯಪೂಜೆ, 11 ಗಂಟೆಗೆ ಕಲ್ಯಾಣನಾಯಕಿ ದೇವಿಗೆ ಬೆಳ್ಳಿಯ ಪಲ್ಲಕ್ಕಿಯಲ್ಲಿ ಉತ್ಸವ, ಅಲಂಕೃತ ಕಲ್ಯಾಣಿತಾಯಿಗೆ ಬಂಗಾರದ ಶೇಷವಾಹನೋತ್ಸವ, ಪ್ರಬಂಧ ಪಾರಾಯಣ ಹಾಗೂ ಮಂಗಳ ವಾದ್ಯಗಳೊಂದಿಗೆ ಉತ್ಸವ ನಡೆಯಲಿದೆ.
ಚೆಲುವನಾರಾಯಣಸ್ವಾಮಿಗೆ ಅ.2ರ ವಿಜಯದಶಮಿಯಂದು ಮಹಾರಾಜರ ಅಲಂಕಾರ ನೆರವೇರಿಸಲಾಗುತ್ತದೆ. ಸಂಜೆ ಸ್ವಾಮಿಗೆ ಅಶ್ವವಾಹನದ ಜಂಬೂಸವಾರಿ ಬನ್ನಿಪೂಜೆ, ವಿಜಯೋತ್ಸವ ಮೆರವಣಿಗೆ ನಡೆಯಲಿದೆ. ನವರಾತ್ರಿ ಬಗ್ಗೆ ಮಾಹಿತಿ ನೀಡಿದ ದೇಗುಲದ ಇಒ ಶೀಲಾ, ಚೆಲುವನಾರಾಯಣಸ್ವಾಮಿ ದೇವಾಲಯದ ರಾಜಗೋಪುರ ಮತ್ತು ರಾಜಬೀದಿಗೆ ಸರಳ ದೀಪಾಲಂಕಾರ ಮಹಾಲಕ್ಷ್ಮಿ ಕಲ್ಯಾಣನಾಯಕಿಗೆ ಗೆ 9 ದಿನ ವಿಶೇಷ ತೋಮಾಲೆ ಮಂಗಳವಾದ್ಯ ವ್ಯವಸ್ಥೆ ಮಾಡಲಾಗಿದೆ. ವಿಜಯದಶಮಿ ಅಚ್ಚುಕಟ್ಟಾಗಿ ನಡೆಸಲು ಪಾರುಪತ್ತೇಗಾರರಿಗೆ ಸೂಚಿಸಲಾಗಿದೆ ಎಂದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ




