ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ರಾಜಕಾರಣದ ಕಾಲಘಟ್ಟವನ್ನು, ಜವಾಹರಲಾಲ್ ನೆಹರು ಅವರ ಕಾಲಘಟ್ಟದೊಂದಿಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಭಾರತದ ವಿದೇಶಾಂಗ ನೀತಿಗೆ ಬೆನ್ನೆಲುಬಾಗಿ ನಿಲ್ಲುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತಾವಧಿ, ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಆಡಳಿತಾವಧಿಗಿಂತ ಉತ್ತಮ ಎಂದು ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ ಮಾತನಾಡಿದ್ದಾರೆ. ಪ್ರಧಾನಿ ಅವರ ಕಾಲಘಟ್ಟ ಮತ್ತು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕಾಲಘಟ್ಟದ ಸಾಮ್ಯತೆಗಳನ್ನು ತೆರೆದಿಟ್ಟರು. ಅದರಲ್ಲೂ ವಿಶೇಷವಾಗಿ ವಿದೇಶಾಂಗ ನೀತಿಯನ್ನು ರೂಪಿಸುವಲ್ಲಿ ಈ ಎರಡೂ ಆಡಳಿತಾವಧಿಗಳು ಭಾರತದ ರಾಜಕಾರಣದ ಮಹತ್ವದ ಕಾಲಘಟ್ಟಗಳು ಎಂದು ಅಮಿತ್ ಶಾ ಹೇಳಿದರು.
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಸೇರಿದಂತೆ ಅನೇಕರ ಆಡಳಿತಾವಧಿಗೆ ಹೋಲಿಸಿದರೆ, ಪ್ರಧಾನಿ ಮೋದಿ ಅವರ ಅಧಿಕಾರಾವಧಿ ವಿಶಿಷ್ಟವಾಗಿದೆ. ಇತಿಹಾಸಕಾರರು ಮೋದಿ ಯುಗವನ್ನು ಇತರ ಪ್ರಧಾನಿಗಳೊಂದಿಗೆ ಹೋಲಿಸಿದಾಗ, ಫಲಿತಾಂಶವು ಪ್ರಧಾನಿ ಮೋದಿಯವರ ಪರವಾಗಿರುತ್ತದೆ ಎಂದು ಕೇಂದ್ರ ಗೃಹ ಸಚಿವರು ಸೂಚ್ಯವಾಗಿ ಹೇಳಿದರು. ಇತ್ತೀಚಿಗೆ ಸಂಸತ್ತಿನಲ್ಲಿ ಜೈಲುಶಿಕ್ಷೆಗೆ ಗುರಿಯಾಗುವ ಪ್ರಧಾನಮಂತ್ರಿ, ಮುಖ್ಯಮಂತ್ರಿ ಮತ್ತು ಸಚಿವರುಗಳನ್ನು ವಜಾಗೊಳಿಸುವ ಮಸೂದೆ ಮಂಡಿಸಿದ ಸಂದರ್ಭದಲ್ಲಿ, ಅಮಿತ್ ಶಾ ಅವರು ಪ್ರಧಾನಿ ಹುದ್ದೆಯನ್ನು ಸಾಂವಿಧಾನಿಕ ತಿದ್ದುಪಡಿ ವ್ಯಾಪ್ತಿಗೆ ತಂದಿದ್ದು ನರೇಂದ್ರ ಮೋದಿ ಎಂದು ಹೇಳಿದರು.
ಇತಿಹಾಸವು ಪ್ರಧಾನಿ ಮೋದಿ ಮತ್ತು ನೆಹರು ಅವರ ಯುಗಗಳನ್ನು ಹೇಗೆ ನೆನಪಿಸಿಕೊಳ್ಳುತ್ತದೆ? ಎಂಬ ಪ್ರಶ್ನೆಗೆ, 16 ವರ್ಷಗಳಿಗೂ ಹೆಚ್ಚು ಕಾಲ ಪ್ರಧಾನಿಯಾಗಿದ್ದ ನೆಹರೂ ಅವರು ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ದಾಖಲೆಯನ್ನು ನೆಹರು ಹೊಂದಿದ್ದಾರೆ. 11 ವರ್ಷಗಳಿಗೂ ಹೆಚ್ಚು ಕಾಲದಿಂದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು, ನಿರಂತರ ಅಧಿಕಾರಾವಧಿಯ ವಿಷಯದಲ್ಲಿ ಭಾರತದ ಎರಡನೇ ಅತಿ ದೀರ್ಘಾವಧಿಯ ಪ್ರಧಾನಿಯಾಗಿ ಈಗಲೂ ಸೇವೆ ಸಲ್ಲಿಸುತ್ತಿದ್ದಾರೆ. ಅಕ್ಟೋಬರ್ 2001ರಿಂದ ಮೇ 2014ರವರೆಗೆ ಗುಜರಾತ್‌ನ ಮುಖ್ಯಮಂತ್ರಿಯಾಗಿಯೂ, ದೀರ್ಘಕಾಲ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಸೇವೆ ಸಲ್ಲಿಸಿದ ಹೆಗ್ಗಳಿಕೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ ಎಂದು ಅಮಿತ್ ಶಾ ಹೇಳಿದರು.
ತಮ್ಮ ಸಂದರ್ಶನದಲ್ಲಿ 370ನೇ ವಿಧಿ ರದ್ದತಿ, ತ್ರಿವಳಿ ತಲಾಖ್ ಸೇರಿದಂತೆ ಇತರ ವಿಚಾರಗಳ ಬಗ್ಗೆ ಅಮಿತ್ ಶಾ ಮಾತನಾಡಿದ್ದಾರೆ. ಕೇವಲ ಒಂದು ದಶಕದಲ್ಲಿ ನರೇಂದ್ರ ಮೋದಿ ಸರ್ಕಾರ ಮಾಡಿದ ಕೆಲಸವನ್ನು ಎತ್ತಿ ತೋರಿಸಿದರು. ಈ ಹಿಂದೆ ಅಮಿತ್ ಶಾ ಅವರು ಪ್ರಧಾನಿ ಮೋದಿ ಅವರ ಕಾರ್ಯವೈಖರಿ ಹೊಗಳುತ್ತಾ, ಪ್ರಧಾನಿ ಮೋದಿ ಕಾರ್ಯಕ್ಷಮತೆಯ ರಾಜಕಾರಣ ಮುನ್ನಲೆಗೆ ತಂದರು ಎಂದು ಹೊಗಳಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ