KARNATAKA TV SPECIAL
BENGALURU : ಈ ಹಸುಗಳಂದ್ರೆ ನಾವು ಅದೊಂದು ಸಾಮಾನ್ಯ ಪ್ರಾಣಿ, ರೈತ ಅವುಗಳನ್ನ ಸಾಕುತ್ತಾನೆ. ಅವುಗಳಿಗೆ ಬೇಕಾದ ಮೇವು , ನೀರಿನ ಜೊತೆಗೆ ಪಾಲನೆ ಪೋಷಣೆಯನ್ನಷ್ಟೇ ಮಾಡುತ್ತಾನೆ. ಅಬ್ಬಬ್ಬಾ ಅಂದ್ರೆ ಅವುಗಳಿಂದ ಹಾಲು ಹಾಗೂ ಗೊಬ್ಬರದ ಲಾಭವನ್ನ ಮಾತ್ರ ರೈತ ಪಡೆಯಲು ಸಾಧ್ಯ ಅಂತ ನಾವೆಲ್ಲರೂ ಸಾಮಾನ್ಯವಾಗಿ ಭಾವಿಸಿರುತ್ತೇವೆ. ಆದರೆ ತಮ್ಮ ಕಟ್ಟು ಮಸ್ತಾದ ಮೈಕಟ್ಟಿನಿಂದಲೇ, ತಮ್ಮಲ್ಲಿರುವ ಅಸಾಧಾರಣ ಸಾಮರ್ಥ್ಯದಿಂದ ತನ್ನ ನಂಬಿದ್ದ ಮಾಲೀಕನ ನಸೀಬನ್ನ ಇಲ್ಲೊಂದು ಹಸುವಿನ ತಳಿ ತೆರೆಯಲು ಕಾರಣವಾಗಿದೆ ಅಂದ್ರೆ ನಿಜಕ್ಕೂ ಆಶ್ಚರ್ಯವಾಗಿರಬೇಕಲ್ಲ..? ಎಸ್.. ತನ್ನ ತೂಕ ಹಾಗೂ ಹಲವು ವಿಶೇಷತಗಳಿಂದಲೇ ತನ್ನ ಮಾಲೀಕನಿಗೆ ಈ ಹಸುವಿನ ತಳಿ ಕೋಟ್ಯಂತರ ರೂಪಾಯಿ ಲಾಭ ಹೇಗೆ ಮಾಡಿಕೊಟ್ಟಿತು..? ಯಾವುದು ಆ ತಳಿ..? ಏನದರ ವಿಶೇಷತೆ ಅನ್ನೋದರ ಕುರಿತ ಕಂಪ್ಲೀಟ್ ಮಾಹಿತಿಗಾಗಿ ತಪ್ಪದೇ ಈ ವಿಡಿಯೋವನ್ನ ಕೊನೆಯವರೆಗೂ ನೋಡಿ..
ನೆಲ್ಲೂರ್ ತಳಿ… ಆಂಧ್ರ ಪ್ರದೇಶ ಮೂಲದ ನೆಲ್ಲೂರ್ ಹೆಸರು ಇದೀಗ ಎಲ್ಲೆಡೆ ಚರ್ಚೆಯಲ್ಲಿದೆ. ಅದಕ್ಕೆ ಕಾರಣವಾಗಿರೋದು ನೆಲ್ಲೂರ್ ಹೆಸರಿನ ಹಸುವಿನ ತಳಿ ಅನ್ನೋದು ಗಮನಾರ್ಹವಾಗಿದೆ. ಆದರೆ ಇದೇ ಈಗ ಜಾಗತಿಕ ಮಟ್ಟದಲ್ಲಿ ಜಾನುವಾರುಗಳ ಹರಾಜಿನಲ್ಲಿ ಐತಿಹಾಸಿಕ ದಾಖಲೆಯೊಂದು ನಿರ್ಮಿಸಲು ಕಾರಣವಾಗಿದೆ ಅಂದ್ರೆ ನಿಜಕ್ಕೂ ನಂಬಲೇಬೇಕಾದ ಸಂಗತಿ. ಈ ಹರಾಜು ಪ್ರಕ್ರಿಯೆಯಲ್ಲಿ ಓಂಗೋಲ್ ತಳಿ ಅಂತ ಕರೆಯಲ್ಪಡುವ ನೆಲ್ಲೂರು ತಳಿ ಹಸುವೊಂದು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದ್ದು, ಅದು ಈಗ ಹೊಸ ಇತಿಹಾಸ ಸೃಷ್ಟಿಸಿದೆ. ಇತ್ತೀಚಿಗೆ ಬ್ರೆಜಿಲ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ವಯಾಟಿನಾ-19 ಎಂಬ ಹೆಸರಿನ ನೆಲ್ಲೂರು ತಳಿಯ ಹಸುವೊಂದು ಬರೋಬ್ಬರಿ 40 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ಅತ್ಯಂತ ದುಬಾರಿ ಮೊತ್ತದ ಹಸುವಾಗಿ ತನ್ನ ಛಾಪನ್ನು ನಿರ್ಮಿಸಿದೆ. ಅಷ್ಟೇ ಅಲ್ಲದೆ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದುಕೊಂಡಿದ್ದು ವಿಶೇಷವಾಗಿದೆ.
ಇನ್ನೂ ಈ ಹಸುವಿನ ತಳಿಯಲ್ಲಿರುವ ವಿಶೇಷತೆಯನ್ನ ನಾವು ಗಮನಿಸಬೇಕಾದರೆ… ಈ ನೆಲ್ಲೂರು ಹಸುವಿನ ತಳಿಯ ತೂಕವು ಸುಮಾರು 1101 ಕಿಲೋಗ್ರಾಂಗಳಿದ್ದು ಇದು ಇತರ ಯಾವುದೇ ಹಸುವಿನ ತೂಕಕ್ಕಿಂತಲೂ ಎರಡು ಪಟ್ಟು ಹೆಚ್ಚಾಗಿದೆ. ಮುಖ್ಯವಾಗಿ ಈ ನೆಲ್ಲೂರು ತಳಿಯನ್ನ 1800 ರ ದಶಕದಲ್ಲಿ ಬ್ರೆಜಿಲ್‌ಗೆ ರಫ್ತು ಮಾಡಲಾಗಿತ್ತು. ಈ ಹಸುಗಳು ಹೆಚ್ಚು ಸ್ಥಿತಿಸ್ಥಾಪಕತ್ವ ಹಾಗೂ ತೀವ್ರ ತಾಪಮಾನವನ್ನ ತಡೆದುಕೊಳ್ಳುವ ಸಾಮರ್ಥ್ಯವನ್ನ ಹೊಂದಿರುತ್ತವೆ. ನೆಲ್ಲೂರು ತಳಿ ಹಸು ಆಂಧ್ರ ಪ್ರದೇಶದಲ್ಲಿ ಜನ್ಮ ಪಡೆದಿರುವುದು ಎಂಬುದು ಗಮನಾರ್ಹ. ಆದರೆ ಈಗ ಅದು ಬ್ರೆಜಿಲ್‌ನ ಅತ್ಯಂತ ಪ್ರಮುಖ ಹಸು ತಳಿಗಳಲ್ಲಿ ಒಂದಾಗಿದೆ. ಅಂಧ್ರದಲ್ಲಿ ಮೊದಲು ಪತ್ತೆಯಾದ ಕಾರಣ ನೆಲ್ಲೂರು ಜಿಲ್ಲೆಯ ಹೆಸರನ್ನೇ ಈ ಜಾನುವಾರಿಗೂ ಇಡಲಾಗಿದೆ.
ಈ ತಳಿಯು ತನ್ನ ಶಾರೀರಿಕತೆಯಿಂದ ಬಲಶಾಲಿಯಾಗಿದ್ದು, ಇದರ ಭ್ರೂಣಗಳು ವೈಜ್ಞಾನಿಕವಾಗಿ ಕೆಲವು ಸಂಶೋಧನೆಗಳಲ್ಲಿ ಬಳಕೆಯಾಗುತ್ತೆ ಅನ್ನೋದು ಅಚ್ಚರಿಯಾಗಿದೆ. ತನ್ನ ಅಸಾಧಾರಣ ಸ್ನಾಯು ರಚನೆ ಮತ್ತು ಅಪರೂಪದ ಆನುವಂಶಿಕ ವಂಶಾವಳಿಗೆ ಇದು ಹೆಸರುವಾಸಿಯಾಗಿದೆ. ಈ ವಿಶಿಷ್ಟ ಗುಣಗಳು ಆ ತಳಿಯ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬ್ರೆಜಿಲ್ ಇದೀಗ ನೆಲ್ಲೂರ್ ತಳಿಯ ಹಸುಗಳನ್ನು ಹೊಂದಿರುವ ದೊಡ್ಡ ರಾಷ್ಟ್ರವಾಗಿದೆ. ಭಾರೀ ಬೇಡಿಕೆ ಇರುವ ಈ ತಳಿಯನ್ನ ಇದೀಗ ಅರ್ಜೆಂಟೀನಾ, ಪರಾಗ್ವೆ, ವೆನೆಜುವೆಲಾ, ಮಧ್ಯ ಅಮೆರಿಕ, ಮೆಕ್ಸಿಕೊ, ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ಹಲವು ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಅಲ್ದೆ ಮುಖ್ಯವಾಗಿ ಪ್ರಪಂಚದಾದ್ಯಂತ ದನಗಳ ಸಂತಾನೋತ್ಪತ್ತಿ ಹೆಚ್ಚಿಸಲು ಇದರ ಭ್ರೂಣಗಳನ್ನ ಈಗ ಎಲ್ಲೆಡೆ ಕಳುಹಿಸಿಕೊಡಲಾಗುತ್ತೆ. ಇನ್ನೂ ತಮ್ಮ ಸ್ವಯಂ ಕಾಳಜಿಯೊಂದಿಗೆ, ಕಠಿಣ ಪರಿಸರದಲ್ಲಿ ಬದುಕುವ ಈ ತಳಿಯ ಸಾಮರ್ಥ್ಯವು ಜಾಗತಿಕ ಜಾನುವಾರು ಉದ್ಯಮದಲ್ಲಿ ಹೆಚ್ಚು ಮೌಲ್ಯಯುತವಾಗಿಸುತ್ತದೆ. ಆಕರ್ಷಕವಾದ ಬಿಳಿ ತುಪ್ಪಳ, ಭುಜಗಳ ಮೇಲೆ ಎದ್ದು ಕಾಣುವ ಗೂನು ಮತ್ತು ಸಡಿಲವಾದ ಚರ್ಮದೊಂದಿಗೆ, ತನ್ನ ಸೌಂದರ್ಯದ ದೃಷ್ಟಿಯಿಂದ ಪ್ರಭಾವಶಾಲಿಯಾಗಿದೆ. ಅಲ್ದೆ ಮುಖ್ಯವಾಗಿ ಶಾಖವನ್ನ ನಿಭಾಯಿಸುವಲ್ಲಿ ತನ್ನ ಕಾರ್ಯ ದಕ್ಷತೆ ತೋರುತ್ತೆ. ಸಡಿಲವಾದ ಚರ್ಮವು ಶಾಖದ ಹರಡುವಿಕೆಗೆ ಸಹಾಯ ಮಾಡುತ್ತದೆ, ಆದರೆ ಗೂನು ಕೊಬ್ಬಿನ ಶೇಖರಣಾ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸುತ್ತದೆ, ಆಹಾರದ ಕೊರತೆಯ ಸಮಯದಲ್ಲಿ ಇದು ತನ್ನನ್ನು ತಾನು ಉಳಿಸಿಕೊಳ್ಳಲು ಹಸುವಿಗೆ ಸಹಕಾರಿಯಾಗುತ್ತೆ.
ತಳಿಯ ಬಲವಾದ ರೋಗನಿರೋಧಕ ಶಕ್ತಿ ಎಂದರೆ ಈ ಹಸುಗಳಿಗೆ ಕಡಿಮೆ ವೈದ್ಯಕೀಯ ಉಪಚಾರದ ಅಗತ್ಯವಿರುತ್ತದೆ, ಇದು ಆರೋಗ್ಯಕರ ಹಿಂಡುಗಳಿಗೆ ಮತ್ತು ಕಡಿಮೆ ನಿರ್ವಹಣಾ ವೆಚ್ಚಗಳನ್ನ ಹೊಂದಿರುತ್ತೆ. ಹೆಚ್ಚುವರಿಯಾಗಿ, ನೆಲ್ಲೂರ್ ತಳಿಗಳು ಪರಿಣಾಮಕಾರಿ ಮೇಯುವ ಪ್ರಾಣಿಗಳಾಗಿವೆ, ಇದು ದೃಢವಾದ ದೇಹದ ಸ್ಥಿತಿಯನ್ನ ಕಾಪಾಡಿಕೊಳ್ಳುವಾಗ ಸವಾಲಿನ ವಾತಾವರಣದಲ್ಲಿಯೂ ತಮ್ಮನ್ನ ತಾವು ರಕ್ಷಿಸಿಕೊಳ್ಳುತ್ತವೆ ಅನ್ನೋದು ನಿಜಕ್ಕೂ ರೋಚಕ. ಈ ಎಲ್ಲ ಕಾರಣಗಳಿಗಾಗಿ ಭಾರತ ಮೂಲದ ಹಸುವಿನ ತಳಿಯು ಈಗ ಜಗತ್ತಿನಾದ್ಯಂತ ಬೇಡಿಕೆಯನ್ನ ಪಡೆದಿದ್ದು ನಿಜಕ್ಕೂ ಭಾರತೀಯರಾದ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.
ಒಟ್ನಲ್ಲಿ.. ಭಾರತವನ್ನ ನಾವು ಕೃಷಿ ಪ್ರಧಾನವಾದ ದೇಶ ಅಂತ ಕರೆಯುತ್ತೇವೆ. ಅದೇ ರೀತಿ ರೈತನನ್ನೂ ಸಹ ನಮ್ಮ ದೇಶದ ಬೆನ್ನೆಲುಬು ಎನ್ನುತ್ತೇವೆ. ಅಲ್ದೆ ಇಷ್ಟೆಲ್ಲ ಹಿರಿಮೆ ಹಾಗೂ ಗರಿಮೆಯನ್ನ ಹೊಂದಿರುವ ಭಾರತದ ಮೂಲದ ಹಸುವಿನ ತಳಿಯೊಂದು ಇಡೀ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಹಲವು ವೈಶಿಷ್ಟ್ಯಗಳ ಜೊತೆಗೆ ಆಕರ್ಷಕ ಸಂಗತಿಗಳನ್ನ ಹೊಂದುವ ಮೂಲಕ ಎಲ್ಲರನ್ನ ನಿಬ್ಬೆರಗಾಗಿಸಿದೆ. ಕೇವಲ ಪ್ರಾಣಿಗಳು ಹಾಲು ಕರೆಯಲು ಹಾಗೂ ರೈತಾಪಿ ವರ್ಗದ ಕೆಲಸ ಕಾರ್ಯಗಳಲ್ಲಷ್ಟೇ ಭಾಗಿಯಾಗದೆ ಆತನ ಗೌರವ, ಘನತೆ ತಂದು ಕೊಡುವಲ್ಲಿ ಪಾತ್ರವಹಿಸುತ್ತವೆ ಅನ್ನೋದನ್ನ ನಮಗೆ ಈ ನೆಲ್ಲೂರು ತಳಿ ತೋರಿಸಿಕೊಟ್ಟಿದೆ ಅಂದ್ರೆ ತಪ್ಪಾಗಲಾರದು.