ಭಕ್ತರ ಅನುಭವವನ್ನು ಇನ್ನಷ್ಟು ಸುಗಮಗೊಳಿಸುವ ದಿಸೆಯಲ್ಲಿ, ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಮತ್ತೊಂದು ಮಹತ್ವದ ತಂತ್ರಜ್ಞಾನ ಕ್ರಮ ಕೈಗೊಂಡಿದೆ. ಈಗ ಟಿಟಿಡಿ ಕೃತಕ ಬುದ್ಧಿಮತ್ತೆ ಆಧಾರಿತ ಎಐ ಚಾಟ್‌ಬಾಟ್ ಅನ್ನು ಪರಿಚಯಿಸಲು ಸಜ್ಜಾಗಿದೆ. ಈ ಹೊಸ ಸೌಲಭ್ಯವು ದೇಶದಾದ್ಯಂತದ ಭಕ್ತರಿಗೆ ಬಹುಭಾಷೆಗಳಲ್ಲಿ ನೈಜ-ಸಮಯದ ಮಾಹಿತಿ ನೀಡಲಿದ್ದು, ದರ್ಶನ, ವಸತಿ, ಸೇವೆಗಳು ಮತ್ತು ದೇಣಿಗೆಗಳ ಕುರಿತು ತಕ್ಷಣದ ಅಪ್‌ಡೇಟ್‌ಗಳನ್ನು ಒದಗಿಸುತ್ತದೆ.
ಈ ಯೋಜನೆಯ ಭಾಗವಾಗಿ, ಅಮೆಜಾನ್ ವೆಬ್ ಸರ್ವೀಸಸ್ ಕಂಪನಿಯು ವರ್ಷಕ್ಕೆ 50 ಲಕ್ಷಕ್ಕೆ ಈ ತಂತ್ರಜ್ಞಾನ ಸೇವೆಯನ್ನು ಒದಗಿಸಲು ಮುಂದಾಗಿದ್ದು, ಟೆಂಡರ್‌ಗೆ ಟಿಟಿಡಿಯಿಂದ ಹಸಿರು ನಿಶಾನೆ ದೊರೆತಿದೆ. ಇದರೊಂದಿಗೆ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಚಾಟ್‌ಬಾಟ್‌ನ ಸಾಫ್ಟ್‌ವೇರ್ ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿದೆ. ಈಗಾಗಲೇ ಟಿಟಿಡಿ ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿ ಅತ್ಯಾಧುನಿಕ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಕಾರ್ಯನಿರ್ವಹಿಸುತ್ತಿದ್ದು, ಹೊಸ ಎಐ ವ್ಯವಸ್ಥೆ ಇದರ ಮುಂದುವರಿದ ಹಂತವಾಗಿದೆ.
ಹೊಸ ಎಐ ಚಾಟ್‌ಬಾಟ್‌ನ್ನು 13 ಭಾರತೀಯ ಭಾಷೆಗಳಲ್ಲಿ ಭಕ್ತರಿಗೆ ಲಭ್ಯವಿರಿಸಲಾಗುತ್ತದೆ. speech-to-text ಮತ್ತು text-to-speech ತಂತ್ರಜ್ಞಾನದೊಂದಿಗೆ, ಭಕ್ತರು ತಮ್ಮ ಮಾತೃಭಾಷೆಯಲ್ಲೇ ಸುಲಭವಾಗಿ ಸಂವಹನ ನಡೆಸಬಹುದು. ದೂರು ಸಲ್ಲಿಕೆ, ಪ್ರತಿಕ್ರಿಯೆ ನೀಡುವ ವ್ಯವಸ್ಥೆಯೂ ಈ ಚಾಟ್‌ಬಾಟ್‌ನಲ್ಲಿದೆ. ಟಿಟಿಡಿ ಉಪ ಐಟಿ ಜನರಲ್ ಮ್ಯಾನೇಜರ್ ವೆಂಕಟೇಶ್ವರ ನಾಯ್ಡು ಅವರ ಪ್ರಕಾರ, ಈ ಯೋಜನೆ ಟಿಟಿಡಿಯ ಡಿಜಿಟಲ್ ಸೇವೆಗಳಿಗೆ ಹೊಸ ಮೆಟ್ಟಿಲಾಗಲಿದ್ದು, ಪ್ರತಿವರ್ಷ ತಿರುಮಲಕ್ಕೆ ಆಗಮಿಸುವ ಲಕ್ಷಾಂತರ ಭಕ್ತರ ಅನುಭವವನ್ನು ಮತ್ತಷ್ಟು ಸುಧಾರಿಸಲು ನೆರವಾಗಲಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




