ಚೀನಾ – ಪಾಕ್ ಸಂಬಂಧ ಬಲಗೊಳ್ಳುತ್ತಿದೆ. ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳು ಮತ್ತೆ ಪಾಕಿಸ್ತಾನದ ವಿರುದ್ಧ ಸಿಡಿದೆದ್ದಿದ್ದು, ಭಾರತದ ಸಹಕಾರವನ್ನು ಅಧಿಕೃತವಾಗಿ ಕೋರಿದ್ದಾರೆ. ಬಲೂಚ್ ನಾಯಕ ಮೀರ್ ಯಾರ್ ಬಲೂಚ್ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಬಹಿರಂಗ ಪತ್ರ ಬರೆದು, ತಮ್ಮ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಉಲ್ಲೇಖಿಸಿರುವಂತೆ ಚೀನಾ–ಪಾಕಿಸ್ತಾನ ಸಂಬಂಧ ದಿನೇದಿನೇ ಬಲವಾಗುತ್ತಿದ್ದು, ಮುಂದಿನ ಕೆಲವು ತಿಂಗಳಲ್ಲಿ ಚೀನಾ ಪಾಕ್ ಆಕ್ರಮಿತ ಬಲೂಚಿಸ್ತಾನದಲ್ಲಿ ತನ್ನ ಸೇನಾ ಪಡೆಗಳನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಇದು ಕೇವಲ ಬಲೂಚಿಸ್ತಾನಕ್ಕಷ್ಟೇ ಅಲ್ಲ, ಭಾರತಕ್ಕೂ ಅಪಾಯಕಾರಿಯಾಗಿದೆ ಎಂದು ತಿಳಿಸಿದ್ದಾರೆ. ಪಾಕಿಸ್ತಾನ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಈ ಅನ್ಯಾಯದ ವಿರುದ್ಧ ನಡೆಯುತ್ತಿರುವ ನಮ್ಮ ಹೋರಾಟಕ್ಕೆ ಭಾರತ ಬೆಂಬಲ ನೀಡಬೇಕು ಎಂದು ಕೋರಿದ್ದಾರೆ.
ಇದೇ ವೇಳೆ, ‘ಆಪರೇಷನ್ ಸಿಂದೂರ’ ಮೂಲಕ ಪಾಕಿಸ್ತಾನ ಬೆಂಬಲಿತ ಉಗ್ರಕೇಂದ್ರಗಳನ್ನು ನಾಶಪಡಿಸಿದ ಭಾರತದ ಕ್ರಮಕ್ಕೆ ಮೀರ್ ಯಾರ್ ಬಲೂಚ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಭಾರತದ ಧೈರ್ಯ, ಶಕ್ತಿ ಮತ್ತು ಪ್ರಾದೇಶಿಕ ಭದ್ರತೆಗೆ ಬದ್ಧತೆಯ ಸಂಕೇತವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಭಾರತ ಮತ್ತು ಬಲೂಚಿಸ್ತಾನದ ನಡುವಿನ ದಶಕಗಳ ಹಳೆಯ ಸಂಬಂಧವನ್ನು ಮತ್ತೊಮ್ಮೆ ಬಲಪಡಿಸಲು ಇದು ಸೂಕ್ತ ಸಮಯವೆಂದೂ ಹೇಳಿದ್ದಾರೆ.
ಇತ್ತ ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಪಾಕಿಸ್ತಾನವನ್ನು ‘ದುಷ್ಟ ನೆರೆರಾಷ್ಟ್ರ’ ಎಂದು ಕರೆದಿದ್ದಾರೆ. ಪಾಕ್ ಪೋಷಿತ ಉಗ್ರವಾದದಿಂದ ಭಾರತದ ನಾಗರಿಕರನ್ನು ರಕ್ಷಿಸಿಕೊಳ್ಳುವುದು ನಮ್ಮ ಹಕ್ಕು ಎಂದು ಸ್ಪಷ್ಟಪಡಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




