ಇಂದಿನಿಂದ ಜಾರಿಗೆ ಬರುತ್ತಿರುವ ಹೊಸ ಜಿಎಸ್ ಟಿ ಸುಧಾರಣಾ ಕ್ರಮ ದೇಶದ ತೆರಿಗೆ ವ್ಯವಸ್ಥೆಗೆ ದೊಡ್ಡ ಬದಲಾವಣೆ ತಂದಿದೆ. ಈಗಾಗಲೇ ಇದ್ದ ನಾಲ್ಕು ಜಿಎಸ್ ಟಿ ಸ್ಲ್ಯಾಬ್ಗಳನ್ನು ಸರಳಗೊಳಿಸಿ ಎರಡು ಮುಖ್ಯ ಸ್ಲ್ಯಾಬ್ಗಳಿಗೆ ಇಳಿಸಲಾಗಿದೆ. ಇಂದಿನಿಂದ ಶೇ. 5 ಮತ್ತು ಶೇ. 18 ಎಂಬ ಎರಡು ದರಗಳಷ್ಟೇ ಜಾರಿಯಲ್ಲಿರುತ್ತವೆ. ಇದಕ್ಕೆ ಹೆಚ್ಚುವರಿಯಾಗಿ, ಐಷಾರಾಮಿ ಹಾಗೂ ಆರೋಗ್ಯಕ್ಕೆ ಹಾನಿಕಾರಕ ವಸ್ತು-ಸೇವೆಗಳ ಮೇಲೆ ಶೇ. 40ರ ವಿಶೇಷ ತೆರಿಗೆ ವಿಧಿಸಲಾಗುತ್ತದೆ. ಇದರೊಂದಿಗೆ ತೆರಿಗೆ ರಚನೆ ಮತ್ತಷ್ಟು ಸುಲಭ ಹಾಗೂ ಪಾರದರ್ಶಕವಾಗಿದೆ.
2017ರ ಮೊದಲು ಅನೇಕ ವಿಧದ ಅಡಕ ತೆರಿಗೆಗಳಿದ್ದವು. ಅದರಿಂದ ತೆರಿಗೆ ವ್ಯವಸ್ಥೆ ಸಂಕೀರ್ಣವಾಗಿತ್ತು. 2017ರಲ್ಲಿ ಜಾರಿಗೆ ಬಂದ ಜಿಎಸ್ಟಿ ಏಕೀಕೃತ ತೆರಿಗೆ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಿತು. ಆಗ ಶೇ. 5, 12, 18 ಮತ್ತು 28ರಂತೆ ನಾಲ್ಕು ಸ್ಲ್ಯಾಬ್ಗಳು ಹಾಗೂ ಕೆಲವು ವಸ್ತುಗಳಿಗೆ ಹೆಚ್ಚುವರಿ ಸುಂಕ ಇತ್ತು. ಈಗ ಜಿಎಸ್ ಟಿ 2.0 ಸುಧಾರಣೆಯಡಿ ಈ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲಾಗಿದೆ.
ಹೊಸ ಕ್ರಮದಿಂದ ಬಹುತೇಕ ವಸ್ತುಗಳ ಬೆಲೆ ಇಳಿಕೆ ಕಾಣಲಿದೆ. ಶೇ. 12ರ ಸ್ಲ್ಯಾಬ್ನಲ್ಲಿದ್ದ ದಿನನಿತ್ಯ ಬಳಕೆಯ ಸರಕುಗಳು ಶೇ. 5ಕ್ಕೆ ಇಳಿದಿವೆ. ಟೂತ್ಪೇಸ್ಟ್, ಸೋಪ್, ಶಾಂಪೂ, ಬಿಸ್ಕತ್, ಜ್ಯೂಸ್, ತುಪ್ಪ, ಸೈಕಲ್, ಸ್ಟೇಷನರಿ, ಬಟ್ಟೆ, ಪಾದರಕ್ಷೆ ಮುಂತಾದ ಗೃಹಬಳಕೆ ವಸ್ತುಗಳು ಈಗ 7-8%ರಷ್ಟು ಕಡಿಮೆ ಬೆಲೆಗೆ ಸಿಗಲಿವೆ. ಅದೇ ರೀತಿ ಶೇ. 28ರ ತೆರಿಗೆಯಲ್ಲಿದ್ದ ಎಸಿ, ಫ್ರಿಡ್ಜ್, ಡಿಶ್ವಾಶರ್, ದೊಡ್ಡ ಟಿವಿ, ಸಿಮೆಂಟ್, ಸಣ್ಣ ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೂ ಶೇ. 18 ತೆರಿಗೆ ವಿಧಿಸಲಾಗಿದೆ. ಇವುಗಳೂ ಬೆಲೆಯಲ್ಲಿ ಕಡಿಮೆಯಾಗಲಿವೆ. ಇನ್ಷೂರೆನ್ಸ್ ಪ್ರೀಮಿಯಂನ ಮೇಲಿನ ತೆರಿಗೆ ಕೂಡ ಶೇ. 18ರಿಂದ ಶೇ. 5ಕ್ಕೆ ಇಳಿದಿದೆ. ಕೆಲ ಸೇವೆಗಳು ಸಂಪೂರ್ಣ ತೆರಿಗೆ ವಿನಾಯಿತಿ ಪಡೆಯಲಿವೆ.
ಆದರೆ, ಸಿಗರೇಟ್, ತಂಬಾಕು ಉತ್ಪನ್ನಗಳು, ಆಲ್ಕೋಹಾಲ್, ಪಾನ್ ಮಸಾಲ, ಆನ್ಲೈನ್ ಬೆಟ್ಟಿಂಗ್ ಹಾಗೂ ಗೇಮಿಂಗ್ಗಳಂತಹ ಹಾನಿಕಾರಕ ಹಾಗೂ ಚಟದ ವಸ್ತು-ಸೇವೆಗಳು ಶೇ. 40ರ ಭಾರಿ ತೆರಿಗೆಗೆ ಒಳಪಡಲಿವೆ. ಅದೇ ರೀತಿ ಐಷಾರಾಮಿ ವಸ್ತುಗಳಾದ ಡೈಮಂಡ್, ಹವಳ ಮುಂತಾದವುಗಳ ಮೇಲೂ ಹೆಚ್ಚಿನ ಜಿಎಸ್ ಟಿ ಜಾರಿಯಾಗಲಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ