www.karnatakatv.net: ಹುಬ್ಬಳ್ಳಿ: ನೂತನವಾಗಿ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳಿಗೆ ಆಸನದ ವ್ಯವಸ್ಥೆ ಕಲ್ಪಿಸುವ ಮೂಲಕ ಹೊಸ ಸಾಮಾನ್ಯ ಸಭೆಯ ಸಭಾಗೃಹ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ. ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈಗ ಹೊಸ ನಿರ್ಧಾರವನ್ನು ಕೈಗೊಂಡಿದೆ.
ಹೌದು. ಈ ಹಿಂದೆ 67 ಪಾಲಿಕೆ ಸದಸ್ಯರು ಸೇರಿದಂತೆ ಮಾಧ್ಯಮದವರಿಗೆ ಹಾಗೂ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಮಾತ್ರವೇ ಇದ್ದ ವ್ಯವಸ್ಥೆಯನ್ನು ಈಗ ಮತ್ತಷ್ಟು ವಿಸ್ತರಿಸಲು ಪಾಲಿಕೆ ಮುಂದಾಗಿದೆ. ಪ್ರಸ್ತುತವಾಗಿ 82 ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಈ ಡೈನಿಂಗ್ ಹಾಲ್ ಜೊತೆಗೆ ಸಾಮಾನ್ಯ ಸಭೆಯ ಮೊದಲಿದ್ದ ಹಾಲ್ ನ್ನು ಸೇರ್ಪಡೆಗೊಳಿಸಿ ವಿಸ್ತರಣೆ ಮಾಡಲು ಪಾಲಿಕೆ ನಿರ್ಧಾರ ಕೈಗೊಂಡಿದ್ದು, ನಿರ್ಮಾಣ ಕಾರ್ಯ ಟೆಂಡರ್ ಪ್ರಕ್ರಿಯೆಯಲ್ಲಿದೆ.
ಇನ್ನೂ 82 ಚುನಾಯಿತ ಪ್ರತಿನಿಧಿಗಳಿಗೆ, ಮಾಧ್ಯಮದವರಿಗೆ ಹಾಗೂ ಸಾರ್ವಜನಿಕರಿಗೆ ವ್ಯವಸ್ಥಿತವಾಗಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲು ನಿರ್ಧಾರವನ್ನು ಕೈಗೊಂಡಿದ್ದು, ಈ ಹಿಂದೆ ಇದ್ದ ಸಭಾ ಗೃಹಕ್ಕೆ ಹೊಸ ರೂಪವನ್ನು ನೀಡಲು ಮುಂದಾಗಿದೆ. ಅಲ್ಲದೇ ತಾತ್ಕಾಲಿಕವಾಗಿ ಸಾಂಸ್ಕೃತಿಕ ಭವನ, ಕನ್ನಡ ಭವನ ತಾತ್ಕಾಲಿಕ ಬಳಕೆಗೆ ಚರ್ಚೆ ನಡೆಸಲಾಗಿದ್ದು, ವಾರ್ಡ್ ಮರುವಿಂಗಡಣೆ ಬಳಿಕ ವಾರ್ಡ್ ಗಳ ಸಂಖ್ಯೆ 67 ರಿಂದ 82 ಕ್ಕೆ ಹೆಚ್ಚಳವಾಗಿದ್ದರಿಂದ ಇಷ್ಟೊಂದು ಸಂಖ್ಯೆಯ ಕಾರ್ಪೋರೇಟರ್ ಗಳು, ನಾಲ್ವರು ಶಾಸಕರು, ಒಬ್ಬ ಎಂಎಲ್‌ಸಿ, ಸಂಸದರು ಹಾಗೂ ಹಲವಾರು ಅಧಿಕಾರಿಗಳು ಮತ್ತು ಮಾಧ್ಯಮದವರು ಸೇರಿದಂತೆ ನೂರಾರು ಜನರಿಗೆ ಪಾಲಿಕೆಯ ಸಭಾಭವನದಲ್ಲಿ ಆಸನ ವ್ಯವಸ್ಥೆ ಕಲ್ಪಿಸುವುದು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಮೂರು ತಿಂಗಳಲ್ಲಿ ಹೊಸ ಸಭಾಗೃಹ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಸಿದ್ಧತೆ ನಡೆಸಲಾಗಿದೆ.
ಒಟ್ಟಿನಲ್ಲಿ ಮೊದಲ ಹಂತದ ಸಭೆಯು ಹೊರಗಡೆ ನಡೆಸಿದರೂ ನಂತರದ ಸಭೆಯನ್ನು ಪಾಲಿಕೆಯಲ್ಲಿಯೇ ನಡೆಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚಿಂತನೆ ನಡೆಸಿದ್ದು, ಶೀಘ್ರವಾಗಿ ಪೂರ್ಣಗೊಂಡು ಸಭೆಗೆ ಸಭಾಗೃಹ ಸಿದ್ಧವಾಗಬೇಕಿದೆ.
ಕರ್ನಾಟಕ ಟಿವಿ – ಹುಬ್ಬಳ್ಳಿ




