ರೈತರ ಗುರುತಿಗೆ ಹೊಸ ಶಕ್ತಿ : ಕಿಸಾನ್ ಪೆಹಚಾನ್ ಕಾರ್ಡ್!

ದೇಶದ ರೈತರನ್ನು ಡಿಜಿಟಲ್ ಮಾದರಿಯಲ್ಲಿ ಗುರುತಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೈಗೊಂಡಿರುವ ಕಿಸಾನ್ ಪೆಹಚಾನ್ ಕಾರ್ಡ್ ಯೋಜನೆ ಇದೀಗ ಭರದಿಂದ ಸಾಗಿದೆ. ವರದಿಗಳ ಪ್ರಕಾರ ಈಗಾಗಲೇ 16 ರಾಜ್ಯಗಳಲ್ಲಿ 7.4 ಕೋಟಿ ರೈತರು ಈ ವಿಶೇಷ ಗುರುತಿನ ಚೀಟಿಯನ್ನು ಪಡೆದಿದ್ದಾರೆ. ಪ್ರಸ್ತುತ ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಈ ಅಭಿಯಾನ ವೇಗವಾಗಿ ಮುಂದುವರಿಯುತ್ತಿದೆ. ಈ ಹಣಕಾಸು ವರ್ಷದಲ್ಲೇ 9 ಕೋಟಿ ರೈತರಿಗೆ ಕಿಸಾನ್ ಪೆಹಚಾನ್ ಕಾರ್ಡ್ ವಿತರಿಸುವ ಗುರಿ ಕೇಂದ್ರ ಸರ್ಕಾರದಾಗಿದೆ.

ದೇಶದಲ್ಲಿ ಒಟ್ಟು 14 ಕೋಟಿ ರೈತರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಇವರ ಪೈಕಿ ಶೇಕಡಾ 30 ರಿಂದ 40ರಷ್ಟು ರೈತರಿಗೆ ಸ್ವಂತ ಜಮೀನು ಇಲ್ಲ, ಇವರು ಗುತ್ತಿಗೆ ಪಡೆದು ಕೃಷಿಗಾರಿಕೆ ಮಾಡುತ್ತಿದ್ದಾರೆ. ಆದ್ದರಿಂದ, ಸ್ವಂತ ಜಮೀನು ಹೊಂದಿರುವ ರೈತರಿಗೆ ಮಾತ್ರ ಕಿಸಾನ್ ಪೆಹಚಾನ್ ಕಾರ್ಡ್ ನೀಡಲಾಗುತ್ತಿದೆ. ಪ್ರಸ್ತುತ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ 11.2 ಕೋಟಿ ರೈತರು ನೊಂದಾಯಿಸಿಕೊಂಡಿದ್ದಾರೆ, ಮತ್ತು ಇವರ ಪೈಕಿ ಹೆಚ್ಚಿನವರು ಈ ಹೊಸ ಗುರುತಿನ ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ. ಸರ್ಕಾರವು 2026-27ರೊಳಗೆ ಒಟ್ಟು 11 ಕೋಟಿ ಕಿಸಾನ್ ಪೆಹಚಾನ್ ಕಾರ್ಡ್ ವಿತರಿಸುವ ಗುರಿ ಹೊಂದಿದೆ.

ಈ ಯೋಜನೆಯ ಪ್ರಮುಖ ಉದ್ದೇಶ ರಾಷ್ಟ್ರವ್ಯಾಪಿ ರೈತರ ಡಿಜಿಟಲ್ ರಿಜಿಸ್ಟ್ರಿಯನ್ನು ನಿರ್ಮಿಸುವುದು. ಇದು ಡಿಜಿಟಲ್ ಅಗ್ರಿಕಲ್ಚರ್ ಮಿಷನ್ ಯೋಜನೆಯ ಭಾಗವಾಗಿದ್ದು, ರೈತರಿಗೆ ವಿವಿಧ ಸರ್ಕಾರಿ ಯೋಜನೆಗಳ ಲಾಭವನ್ನು ನೇರವಾಗಿ ತಲುಪಿಸಲು ಅನುಕೂಲವಾಗಲಿದೆ. ಹೀಗಾಗಿ, ಕಿಸಾನ್ ಪೆಹಚಾನ್ ಕಾರ್ಡ್ ಮುಂದಿನ ದಿನಗಳಲ್ಲಿ ಪಿಎಂ ಕಿಸಾನ್ ಸೇರಿದಂತೆ ಹಲವಾರು ಕೃಷಿ ಯೋಜನೆಗಳ ಪ್ರಮುಖ ದಾಖಲೆ ಮತ್ತು ಆಧಾರವಾಗಿ ಕಾರ್ಯನಿರ್ವಹಿಸಲಿದೆ.

ಇತ್ತೀಚಿನ ವರದಿಗಳ ಪ್ರಕಾರ, ಅತಿಹೆಚ್ಚು ಪೆಹಚಾನ್ ಕಾರ್ಡ್ ವಿತರಿಸಿರುವ ರಾಜ್ಯ ಉತ್ತರ ಪ್ರದೇಶ ಆಗಿದ್ದು, ಇಲ್ಲಿ 1.56 ಕೋಟಿ ರೈತರು ಈ ಕಾರ್ಡ್ ಪಡೆದಿದ್ದಾರೆ. ಅದೇ ರೀತಿ ಮಹಾರಾಷ್ಟ್ರದಲ್ಲೂ ಕೋಟಿಗಿಂತ ಹೆಚ್ಚು ರೈತರಿಗೆ ಈ ಕಾರ್ಡ್ ವಿತರಿಸಲಾಗಿದೆ. ಮಧ್ಯಪ್ರದೇಶ, ರಾಜಸ್ಥಾನ್, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲೂ ಈ ಅಭಿಯಾನ ಯಶಸ್ವಿಯಾಗಿ ಮುಂದುವರಿಯುತ್ತಿದೆ.
ರೈತರ ಜೀವನಕ್ಕೆ ಡಿಜಿಟಲ್ ಗುರುತು ನೀಡುವ ಈ ಕಿಸಾನ್ ಪೆಹಚಾನ್ ಕಾರ್ಡ್, ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರದ ಪರಿವರ್ತನೆಯ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author