ರಾಜಧಾನಿ ಬೆಂಗಳೂರಿನ ಮನೆ ಮನೆ ಕೊಳವೆ, ಟ್ಯಾಂಕರ್ ಮೂಲಕ ಕೋಟ್ಯಂತರ ಜನರಿಗೆ ಕಾವೇರಿ ಕುಡಿಯುವ ನೀರು ಪೂರೈಸುತ್ತಿರುವ ಬೆಂಗಳೂರು ಜಲಮಂಡಳಿಯು, ಇದೀಗ ಬಿಸ್ಲೇರಿ ಮಾದರಿಯಲ್ಲಿ ಕಾವೇರಿ ನೀರಿನ ಬಾಟಲ್ ಪರಿಚಯಿಸುವುದಕ್ಕೆ ಭರ್ಜರಿ ತಯಾರಿ ಮಾಡಿಕೊಂಡಿದೆ. ಅಂದುಕೊಂಡತೆ ಎಲ್ಲವೂ ಸುಗಮವಾದರೆ, ಬಸ್ ಸ್ಟ್ಯಾಂಡ್, ರೈಲ್ವೆ ಸ್ಟೇಷನ್‌ನಿಂದ ಏರ್‌ಪೋರ್ಟ್‌ವರೆಗೆ ಎಲ್ಲೆಡೆ ಬೆಂಗಳೂರು ಜಲಮಂಡಳಿಯ ಕಾವೇರಿ ನೀರಿನ ಬಾಟಲ್‌ಗಳು ಶೀಘ್ರದಲ್ಲಿ ಲಭ್ಯವಾಗಲಿವೆ.
ದಶಕಗಳಿಂದ ಸಿಲಿಕಾನ್ ಸಿಟಿ ಬೆಂಗಳೂರಿನ ಮನೆ ಮನೆಗೆ ಕಾವೇರಿ ನೀರು ಪೂರೈಕೆಯೊಂದಿಗೆ 1.40 ಕೋಟಿಗೂ ಅಧಿಕ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಬೆಂಗಳೂರು ಜಲಮಂಡಳಿಯು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಹೊಸ ಸಾಹಸಕ್ಕೆ ಕೈ ಹಾಕುವುದಕ್ಕೆ ಮುಂದಾಗಿದೆ. ಒಂದು ಲೀಟರ್ ಮಾದರಿಯ ಬಾಟಲ್‌ನಿಂದ ವಿವಿಧ ಪ್ರಮಾಣದ ಬಾಟಲ್‌ಗಳೊಂದಿಗೆ ಮಾರುಕಟ್ಟೆಗೆ ಬರುವುದಕ್ಕೆ ಸಜ್ಜಾಗಿದೆ. ಈಗಾಗಲೇ ಖಾಸಗಿ ಮಾರುಕಟ್ಟೆ ಪ್ರವೇಶಿಸುವುದಕ್ಕೆ ಸಂಬಂಧಿಸಿದಂತೆ ಜಲಮಂಡಳಿಯ ಅಧಿಕಾರಿಗಳ ಹಂತದಲ್ಲಿ ಸಾಕಷ್ಟು ಸಾಧಕ- ಬಾಧಕ ಚರ್ಚೆ ನಡೆಸಲಾಗಿದ್ದು, ನೀಲ ನಕ್ಷೆ ಸಹ ತಯಾರಿಸಿಕೊಳ್ಳಲಾಗಿದೆ.
ಈ ಸಂಬಂಧ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿ ಒಪ್ಪಿಗೆ ಪಡೆಯುವುದಷ್ಟೇ ಬಾಕಿ ಇದ್ದು, ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯುವುದಕ್ಕೆ ನಿರ್ಧರಿಸಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಅಂತಾರಾಷ್ಟ್ರೀಯ ಬ್ರ್ಯಾಂಡ್ ಕಂಪನಿಯಿಂದ ಸ್ಥಳೀಯ ಮಟ್ಟದ ಸಾಕಷ್ಟು ಬ್ರ್ಯಾಂಡ್‌ಗಳಿವೆ. ಈ ಬ್ರ್ಯಾಂಡ್‌ಗಳ ನಡುವೆ ಬೆಂಗಳೂರು ಜಲಮಂಡಳಿಯು ಪೈಪೋರ್ಟಿ ನಡೆಸಬೇಕಿದೆ. ಅದೆಲ್ಲದಕ್ಕೂ ಕಾರ್ಯತಂತ್ರ ರೂಪಿಸಿಕೊಳ್ಳಲಾಗಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಮೂಲಗಳು ತಿಳಿಸಿವೆ.
ನೀರಿನ ಬಾಟಲ್ ಉದ್ದಿಮೆ ಪ್ರವೇಶಿಸುವುದಕ್ಕೆ ಬೆಂಗಳೂರು ಜಲಮಂಡಳಿಗೆ ಲಭ್ಯವಾಗಿರುವ ಬಿಐಎಸ್ ಸರ್ಟಿಫಿಕೇಷನ್ ಬಲವೇ ಮೂಲ ಕಾರಣವಾಗಿದೆ. ದೇಶದ ಯಾವುದೇ ಸರ್ಕಾರಿ ನೀರು ಪೂರೈಕೆ ಸಂಸ್ಥೆಗಳಿಗೆ ಬಿಐಎಸ್ ಸರ್ಟಿಫಿಕೇಷನ್ ಲಭ್ಯವಾಗಿಲ್ಲ. ಬಿಐಎಸ್ ಸರ್ಟಿಫಿಕೇಷನ್ ಹೊಂದಿರುವ ಸಂಸ್ಥೆಗಳು ಮಾತ್ರವೇ ಬಾಟಲ್ ನೀರು ಪೂರೈಕೆಗೆ ಅವಕಾಶವಿದೆ. ಈ ಅವಕಾಶವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುವುದಕ್ಕೆ ಇದೀಗ ಜಲಮಂಡಳಿ ಮುಂದಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

