ರಾಜ್ಯ ರಾಜಕೀಯದಲ್ಲಿ ಈಗ ನವೆಂಬರ್ ಕ್ರಾಂತಿ ಚರ್ಚೆ ಬಿಸಿಯಾಗುತ್ತಿದೆ. ಪ್ರತಿ ದಿನ ಹೊಸ ಹೇಳಿಕೆ, ಹೊಸ ರಾಜಕೀಯ ಸಂಕೇತಗಳು ಗಮನ ಸೆಳೆಯುತ್ತಿವೆ. ಇತ್ತೀಚೆಗೆ 5 ವರ್ಷ ಸಿಎಂ ನಾನೇ ಎಂದು ಖಚಿತವಾಗಿ ಹೇಳುತ್ತಿದ್ದ ಸಿದ್ದರಾಮಯ್ಯ, ಈಗ ಹೈಕಮಾಂಡ್ ಏನು ಹೇಳುತ್ತದೋ ಅದಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತೇನೆ ಎಂದು ಹೇಳಿರುವುದು ಹೊಸ ಕುತೂಹಲಕ್ಕೆ ಕಾರಣವಾಗಿದೆ.
ಇತ್ತ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದು, ಸಿಎಂ ಏನು ಹೇಳುತ್ತಾರೆ ಅದನ್ನೇ ನಾವು ಕೇಳುತ್ತೇವೆ, ಅವರ ಮಾತಿನ ಮೇಲೇ ನಂಬಿಕೆ ಇಟ್ಟು ಮುಂದೆ ಸಾಗುತ್ತೇವೆ ಎಂದು ದೆಹಲಿ ಭೇಟಿಯ ಬಳಿಕ ತಿಳಿಸಿದ್ದಾರೆ. ಆದರೆ ರಾಜಕೀಯ ವಲಯದಲ್ಲಿ ಡಿಕೆಶಿ ಸಿಎಂ ಕುರ್ಚಿಗಾಗಿ ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂಬ ಚರ್ಚೆ ಜೋರಾಗಿದೆ.
ಇದೇ ವೇಳೆ ರಾಜ್ಯದೊಳಗೆ ಅಹಿಂದ ನಾಯಕನೇ ಮುಂದಿನ ಸಿಎಂ ಆಗಬೇಕು ಎನ್ನುವ ಬೇಡಿಕೆ ಮತ್ತೊಮ್ಮೆ ಬಲ ಪಡೆಯುತ್ತಿದೆ. ಇದರ ನಡುವೆ ಎಚ್.ಸಿ. ಮಹದೇವಪ್ಪ ಮತ್ತು ಜೆ. ಪರಮೇಶ್ವರ್ ಸೀಕ್ರೆಟ್ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಸಿರುವುದು ಮತ್ತಷ್ಟು ರಾಜಕೀಯ ಸಂಚಲನ ಮೂಡಿಸಿದೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ವೇದಿಕೆ ಮೇಲೆ ಅಪ್ಪನ ರಾಜಕೀಯ ಕೊನೆಗಾಲಕ್ಕೆ ಬಂದಿದೆ, ಸತೀಶ್ ಜಾರಕಿಹೊಳಿ ಪಕ್ಷ ಮುನ್ನಡೆಸಲಿ ಎಂದು ಹೇಳಿದ್ದರಿಂದಲೇ ನವೆಂಬರ್ ಕ್ರಾಂತಿ ಚರ್ಚೆಗೆ ಮತ್ತಷ್ಟು ಬಣ್ಣ ತುಂಬಿತ್ತು.
ಈಗ ಸತೀಶ್ ಜಾರಕಿಹೊಳಿ ಅವರು ಸ್ವತಃ ಪ್ರತಿಕ್ರಿಯಿಸಿದ್ದು, ಈಗ ಅವಕಾಶಗಳಿಲ್ಲ, ಮುಂದಿನ ದಿನಗಳಲ್ಲಿ ಬರಬಹುದು. ಅವಕಾಶಗಳನ್ನು ಸೃಷ್ಟಿಸಬೇಕು, ನಾವು ಆ ಮಟ್ಟಕ್ಕೆ ಬೆಳೆಯಬೇಕು. ನವೆಂಬರ್ ಕ್ರಾಂತಿ ಬಗ್ಗೆ ಏನೂ ಗೊತ್ತಿಲ್ಲ, ಟೈಮ್ ಇದೆ, ಕಾದು ನೋಡೋಣ. ಸದ್ಯಕ್ಕೆ ನಾಯಕತ್ವ ಬದಲಾವಣೆಯ ಚರ್ಚೆ ಇಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ನಾವು ಸಾಗುತ್ತಿದ್ದೇವೆ. ಹೈಕಮಾಂಡ್ ಇದೆ, ಅವರ್ಯಾಕೆ ಕ್ರಾಂತಿ ಆಗಲು ಬಿಡ್ತಾರೆ? ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದವರು ಎಲ್ಲೂ ಹೋಗಲ್ಲ, ಇಲ್ಲೇ ಇರ್ತಾರೆ, ನವೆಂಬರ್ ಬಂತಲ್ಲ, ನೋಡೋಣ ಎಂಬ ಮಾತು ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆ ಹುಟ್ಟುಹಾಕಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

