ಕೆಂಗೇರಿ ರಸ್ತೆಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದಲ್ಲಿ ಡಿಸೆಂಬರ್ 15 ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರ ಉತ್ತರಾಧಿಕಾರಿಯಾಗಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಗೆ ಪಟ್ಟಾಧಿಕಾರ ಮಹೋತ್ಸವ ಸಂಪನ್ನಗೊಂಡಿತು. ಧಾರ್ಮಿಕ ವಿಧಿ ವಿಧಾನದಂತೆ ಪಟ್ಟಾಧಿಕಾರ ಕಾರ್ಯಕ್ರಮದ ಭಾಗವಾಗಿ ಗಂಗೆ ಪೂಜೆ, ಶಿವಪಾರ್ವತಿ ಪೂಜೆ, ಗಣಪತಿ ಪೂಜೆಯನ್ನು ನೆರವೇರಿತು. ಇದಾಗಿ ನೂತನ ಸ್ವಾಮೀಜಿಗೆ ರುದ್ರಾಕ್ಷಿ ಮುಕುಟ ಧಾರಣೆ ವಿಧಿಯೂ ನೆರವೇರಿತು. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ ಪೀಠಾಧ್ಯಕ್ಷ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಸ್ಪಟಿಕಪುರಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ. ಶ್ರೀ ಸೌಮ್ಯನಾಥ ಸ್ವಾಮೀಜಿ ಸೇರಿ 50ಕ್ಕೂ ಅಧಿಕ ಸ್ವಾಮೀಜಿಗಳ ಸಮ್ಮುಖದಲ್ಲಿ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ ನೆರವೇರಿತು.
ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಶ್ರೀಗಳ ಕಾರಣದಿಂದ ಇಂದು ಒಕ್ಕಲಿಗರ ಮಹಾಸಂಸ್ಥಾನದ ಮೂಲಕ ಸಮಾಜಕ್ಕೆ ಅರ್ಪಣೆಯಾಗುತ್ತಿದ್ದೇವೆ. ಸಂಸ್ಥಾನ ಮಠಕ್ಕೆ ಹಲವರ ಕೊಡುಗೆ, ತ್ಯಾಗಗಳು ಸಮರ್ಪಣೆಯಾಗಿವೆ. ಒಕ್ಕಲಿಗ ಸಮಾಜವನ್ನು ನಾವಿಬ್ಬರೂ ಸೇರಿ ಮುನ್ನಡೆಸೋಣ ಎಂದು ಆದಿಚುಂಚನಗಿರಿ ಶ್ರೀಗಳು ಹೇಳಿರುವುದಷ್ಟೆ ಅಲ್ಲ, ಇಂದು ಪಕ್ಕದಲ್ಲೇ ಇದ್ದು ಈ ಕಾರ್ಯಕ್ರಮಕ್ಕೆ ಬಲತುಂಬಿದ್ದಾರೆ ಎಂದು ಶ್ರೀ ನಿಶ್ಚಲಾನಂದ ಸ್ವಾಮೀಜಿ ಹೇಳಿದರು.
ನನಗೆ ವಯಸ್ಸಾಯಿತು. 80 ವರ್ಷವಾಗಿರುವ ಕಾರಣ ಆರೋಗ್ಯ ಕ್ಷೀಣಿಸುತ್ತಿದೆ. ಆದ್ದರಿಂದ ಉತ್ತರಾಧಿಕಾರಿ ನೇಮಕದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅದರಂತೆ ಮಂಡ್ಯದ ನಿವೃತ್ತ ಜಿಲ್ಲಾಧಿಕಾರಿ ಎಚ್ ಎಲ್ ನಾಗರಾಜು ಪಟ್ಟಾಭಿಷೇಕ ನೆರವೇರಿಸಿದ್ದೇವೆ. ಬಡ ಕುಟುಂಬದ ಮಕ್ಕಳು ವೈದ್ಯಕೀಯ ವಿದ್ಯಾಭ್ಯಾಸ ಮಾಡಬೇಕು. ಅದನ್ನು ನೆರವೇರಿಸಲು ಮೆಡಿಕಲ್ ಕಾಲೇಜು ನಿರ್ಮಾಣದ ಸಂಕಲ್ಪವನ್ನು ಮಾಡಬೇಕು. ಈ ನಿಟ್ಟಿನಲ್ಲಿ ಸಮಾಜದ ಸಹಕಾರ ಬೇಕು ಎಂದು ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ಪೀಠಾಧಿಪತಿ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಹೇಳಿದರು.
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮತ್ತು ಆದಿಚುಂಚನಗಿರಿ ಮಠ ಎರಡೂ ನಾಥ ಪರಂಪರೆಗೆ ಸೇರಿದ್ದು. ನಾವು ಎಲ್ಲರೂ ಸಮಾಜಸೇವೆಯಲ್ಲಿ ತೊಡಗಿದ್ದೇವೆ. ಈ ಮಠಕ್ಕೆ ಆದಿಚುಂಚನಗಿರಿ ಮಠದ ಸಹಕಾರ ಎಂದೆಂದಿಗೂ ಇರುತ್ತದೆ. 1974ರಿಂದ ಹಿರಿಯ ಶ್ರೀಗಳ ನೇತೃತ್ವದಲ್ಲಿ ವಿಶ್ವ ಒಕ್ಕಲಿಗರ ಮಠ ನಡೆಯುತ್ತಿದೆ. ಇದು ಹಳೆಯ ಮಠವಾಗಿದೆ. ಹೊಸ ಗುರುಗಳು ನಮ್ಮ ಮಠದಲ್ಲಿ ಬೆಳೆದವರು. ಗುರು ಪರಂಪರೆ ಮತ್ತು ಸಂಪ್ರದಾಯ ಒಂದೇ ಇರುವುದರಿಂದ ಮೂರನೇ ವ್ಯಕ್ತಿ ಬರಲ್ಲ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠವನ್ನು ಇನ್ನಷ್ಟು ಬೆಳೆಸುವ ಸಂಕಲ್ಪ ತೊಟ್ಟಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಅಂತ ಆದಿ ಚುಂಚನಗಿರಿ ಮಠ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾರೈಸಿದರು.
ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ ಮೌನ ತಪಸ್ವಿ. ಹಿರಿಯರ ಸೇವೆಯನ್ನು ಈ ಸಮಾಜ ಬಳಸಿಕೊಂಡಿದೆ. ಈಗ ರಾಜ್ಯದ 50ಕ್ಕೂ ಅಧಿಕ ಮಠದ ಶ್ರೀಗಳು ನಿಶ್ಚಲಾನಂದನಾಥ ಸ್ವಾಮೀಜಿಯನ್ನು ನೂತನ ಉತ್ತಾಧಿಕಾರಿಯಾಗಿ ನೆರವೇರಿಸಿರುವುದು ಚಾರಿತ್ರಿಕವಾದದ್ದು ಎಂದು ಶ್ರೀ ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.
ಶ್ರೇಷ್ಠ ಗುರುನಿಂದ ಪಡೆದ ಜ್ಞಾನವನ್ನು ಶಿಷ್ಯಂದಿರು ಸಮಾಜಕ್ಕೆ ಹಂಚುವಂತಾದಾಗ ಆಧ್ಯಾತ್ಮಿಕ ಪರಂಪರೆಯಲ್ಲಿ ಮುನ್ನಡೆಯಲು ಸಾಧ್ಯ. ಬದಲಾದ ಕಾಲಘಟ್ಟದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸನ್ಯಾಸಿಗಳನ್ನು ಈ ಸಮಾಜ ಸೂಕ್ಷ್ಮವಾಗಿ ಗಮನಿಸುತ್ತದೆ. ನಮ್ಮ ಬಗ್ಗೆ ಏನೇ ಟೀಕೆ ಬಂದರೂ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಸಮಾಜ ಕಾರ್ಯದಲ್ಲಿ ಮುಂದೆ ಸಾಗುವಂತಾಗಬೇಕು ಅಂತ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರಿಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.