ಮುಡಾ ಅಂದ್ರೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣ ಮತ್ತೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲೆನೋವಾಗಿ ಪರಿಣಮಿಸಿದ್ದ ಈ ಪ್ರಕರಣದಲ್ಲಿ ಇದೀಗ ಮುಡಾ ಅಧಿಕಾರಿಗಳೇ ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ.
ಜಾರಿ ನಿರ್ದೇಶನಾಲಯ 440 ಕೋಟಿ ರೂ. ಮೌಲ್ಯದ 252 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ ಇ.ಡಿ ಅಧಿಕಾರಿಗಳು, ಈ ಸೈಟ್‌ಗಳನ್ನು ಅಧಿಕಾರಿಗಳು ಅಕ್ರಮವಾಗಿ ಹಂಚಿಕೆ ಮಾಡಿರುವುದನ್ನು ಪತ್ತೆಹಚ್ಚಿದ್ದಾರೆ.
ಮುಡಾ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಅವರ ಕುಟುಂಬದ ಹೆಸರಿನಲ್ಲಿ 40.8 ಕೋಟಿ ರೂ. ಮೌಲ್ಯದ 32 ಸೈಟ್‌ಗಳು ಅಕ್ರಮವಾಗಿ ಪಡೆದಿರುವುದನ್ನು ಇ.ಡಿ ಪತ್ತೆ ಹಚ್ಚಿದ್ದಾರೆ. ಅಷ್ಟೇ ಅಲ್ಲ ಆ ಅಕ್ರಮ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ದಿನೇಶ್ ಕುಮಾರ್ ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಿವೇಶನಗಳನ್ನು ಮರುಹಂಚಿಕೆ ಮಾಡಿ ಆರ್ಥಿಕ ಲಾಭ ಪಡೆದಿದ್ದರು ಎಂದು ಇ.ಡಿ ಆರೋಪಿಸಿದೆ. ತನಿಖೆಯ ವೇಳೆ ಹಣ ವರ್ಗಾವಣೆ ಹಾಗೂ ಆಸ್ತಿ ಗಳಿಕೆಯ ದಾಖಲೆಗಳು ದೊರೆತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದು ಗಮನಾರ್ಹ ಅಂಶವೆಂದರೆ, 2022ರಲ್ಲಿ ದಿನೇಶ್ ಕುಮಾರ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು. 50:50 ಅನುಪಾತದಡಿ ಸೈಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಹೊರಬಂದ ತಕ್ಷಣ ಸರ್ಕಾರ ಅವರು ಅವರನ್ನು ವರ್ಗಾವಣೆ ಮಾಡಿತ್ತು.
ಇದೇ ಪ್ರಕರಣದ ಸಂಬಂಧ ಕೆಲವು ತಿಂಗಳ ಹಿಂದೆ ಇ.ಡಿ 100 ಕೋಟಿ ರೂ. ಮೌಲ್ಯದ 92 ಸೈಟ್‌ಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಜಪ್ತಿ ಮಾಡಿತ್ತು. ಇತ್ತೀಚಿನ ಮುಟ್ಟುಗೋಲು ಸೇರಿ, ಇಡಿ ವಶಪಡಿಸಿಕೊಂಡ ಆಸ್ತಿಗಳ ಒಟ್ಟು ಮೌಲ್ಯ ಈಗ 400 ಕೋಟಿಗೂ ಮೀರಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ