2024 ಮುಗಿದು ಹೊಸ ವರ್ಷ 2025 ಆರಂಭವಾಗಿದೆ. ಹೊಸ ಚೈತನ್ಯ ಹಾಗೂ ಹೊಸ ಹುರುಪಿನೊಂದಿಗೆ ನಾವು ಹೆಜ್ಜೆ ಹಾಲಿದ್ದೇವೆ. ಇನ್ನು ಜನವರಿ 1 ರಿಂದ ದೇಶದಲ್ಲಿ ಹೊಸ ಬದಲಾವಣೆ ಜಾರಿಗೆ ಬಂದಿದ್ದು, ಈ ಬದಲಾವಣೆಗಳು ಎಲ್ ಪಿ ಜಿ ಬೆಲೆಗಳಿಂದ ಹಿಡಿದು ಇಪಿಎಫ್ಒ ನಿಯಮಗಳವರೆಗೂ ಎಲ್ಲಾ ಕ್ಷೇತ್ರಗಳಲ್ಲೂ ವ್ಯಾಪಿಸಿದೆ. ಹಾಗಿದ್ರೆ ದಿನ ನಿತ್ಯ ಜಿವನದ ಮೇಲೆ ಪರಿಣಾಮ ಬೀರುವ ಬದಲಾವಣೆಗಳು ಯಾವುದು ಅನ್ನೋದನ್ನ ನೋಡೋಣ.
ಹೌದು ಜನವರಿ 1 ರಿಂದ ದೇಶದಲ್ಲಿ ಹೊಸ ರೂಲ್ಸ್ ಗಳು ಜಾರಿಗೊಳ್ತಿವೆ. ಅದ್ರಲ್ಲೂ ಹೊಸ ವರ್ಷದಲ್ಲಿ ದೇಶದ ರೈತರಿಗೆ ಅನುಕೂಲವಾಗುವಂತೆ ಆರ್ ಬಿ ಐ ಗುಡ್ ನ್ಯೂಸ್ ಒಂದನ್ನ ಕೊಟ್ಟಿದೆ. ಜನವರಿ 1 ರಿಂದ ಯಾವುದೇ ರೀತಿ ಆಧಾರ ಇಲ್ಲದೇ, ಅಡಮಾನ ರಹಿತ ಕೃಷಿ ಸಾಲ ಮಿತಿಯನ್ನ 2 ಲಕ್ಷ ರೂ. ಗೆ ಏರಿಕೆ ಮಾಡಿದೆ. ಇನ್ನು ಈ ಹಿಂದೆ ಇದು 1.60 ಲಕ್ಷ ರೂ.ಇತ್ತು.
ಇನ್ನು ಹೊಸ ವರ್ಷದಲ್ಲಿ ಕಾರು ಖರೀದಿ ಮಾಡೋರಿಗೆ ಕಂಪನಿಗಳು ಬಿಗ್ ಶಾಕ್ ನೀಡಿದೆ. ಮಾರುತಿ ಸುಝುಕಿ, ಹ್ಯುಂಡೈ, ಮಹೀಂದ್ರಾ,ಎಂಜಿ, ಕಿಯಾ, ಆಡಿ , ಬಿಎಂಡಬ್ಲ್ಯೂ ಕಂಪನಿಗಳು ಹೊಸ ವರ್ಷದಲ್ಲಿ ತಮ್ಮ ಕಾರಿನ ದರ ಶೇ. 2 ರಿಂದ 4 ರಷ್ಟು ಏರಿಕೆಗೆ ಮಾಡಿವೆ. ಇನ್ನು ಇದಕ್ಕೆ ಕಚ್ಚಾ ವಸ್ತುಗಳ ದರ ಏರಿಕೆ ವೇತನ ಹೆಚ್ಚಳದ ಕಾರಣವನ್ನ ಕಂಪನಿಗಳು ನೀಡಿವೆ.
ಇನ್ನು ಈ ವರ್ಷ ಭವಿಷ್ಯ ನಿಧಿ ಖಾತೆದಾರರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ಕೆಲವೊಂದಿಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದ್ರಲ್ಲಿ ಪ್ರಮುಖವಾಗಿ ಪಿಎಫ್ ಮೊತ್ತವನ್ನು ಯಾವುದೇ ಬ್ಯಾಂಕ್ ನ ಎಟಿಎಂನಿಂದ ವಿತ್ ಡ್ರಾ ಮಾಡೋ ಯೋಜನೆ ಇದಾಗಿದೆ. ಇನ್ನು ಕೇಂದ್ರ ಕಾರ್ಮಿಕ ಇಲಾಖೆಯು ಇದಕ್ಕೆ ಸಂಬಂಧಿಸಿದ ಎಲ್ಲಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಸಾಮಾನ್ಯವಾಗಿ ಪ್ರತಿ ತಿಂಗಳ ಆರಂಭದಲ್ಲಿ ಎಲ್ ಪಿ ಜಿ ದರ ಪರಿಷ್ಕರಣೆಯಾಗುತ್ತದೆ. ಅದರಂತೆ, ಅಡುಗೆ ಅನಿಲ ಸಿಲಿಂಡರ್ , ವಾಣಿಜ್ಯ ಬಳಕೆಯ ಸಿಲಿಂಡರ್ ದರ ಏರಿಕೆಯೂ ಆಗಬಹದು ಅಥವಾ ಇಳಿಕೆಯೂ ಆಗಬಹುದು. ವೈಮಾನಿಕ ಇಂಧನದ ದರವೂ ಪರಿಷ್ಕರಣೆಯಾಗಬಹುದು.
ಎನ್ ಪಿ ಸಿ ಐ ಯೂ ರುಪೇ ಕ್ರೆಡಿಟ್ ಕಾರ್ಡ್ ಹೊಂದಿರೋರಿಗೆ ಹೊಸ ಸೌಲಭ್ಯ ಒದಗಿಸಿದೆ. ಇಂದಿನಿಂದ ಈ ಕಾರ್ಡ್ ಇರುವವರಿಗೆ ಏರ್ ಪೋರ್ಟ್ ಗಳಲ್ಲಿ ಲಾಂಜ್ ಸೌಲಭ್ಯ ಪಡೆಯಬಹುದಾಗಿದೆ. ಇದು ಈ ಕಾರ್ಡ್ ನಲ್ಲಿ ನಡೆದಿರುವ ವಹಿವಾಟು ಆಧರಿಸಿರುತ್ತದೆ.
ಜ.1 ರಿಂದ ಬ್ಯಾಂಕ್ ಗ್ರಾಹಕರು ಚೆಕ್ ಹಾಕಿದ 2 ಗಂಟೆಗಳಲ್ಲಿ ಬ್ಯಾಂಕ್ ಗಳು ಅವುಗಳನ್ನು ನಗದೀಕರಣ ಮಾಡಲಿವೆ. ಒಂದು ವೇಳೆ ಚೆಕ್ ನೀಡಿದವ್ರ ಖಾತೆಯಲ್ಲಿ ಹಣವಿಲ್ಲದಿದ್ರೆ ಖಾತೆದಾರರಿಗೂ, ಚೆಕ್ ಮೂಲಕ ಹಣ ಪಡೆದವರಿಗೂ ದಂಡ ವಿಧಿಸಲಾಗುತ್ತದೆ. ಶಾಖೆಗಳಲ್ಲಿ ಚೆಕ್ ಡೆಪಾಸಿಟ್ ಮತ್ತು ನಗದೀಕರಣ ಪ್ರಕ್ರಿಯೆ ಬೆಳಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 2.30ರ ವರೆಗೂ ಮಾತ್ರ ನಡೆಯಲಿದೆ.
ಅಂದಹಾಗೆ ಇನ್ನು ಫೀಚರ್ ಫೋನ್ ಗಳಲ್ಲಿ ಯುಪಿಐ 123 ಪೇ ಬಳಸಿಕೊಂಡು 10 ಸಾವಿರ ರೂ. ಯುಪಿಐ ಪಾವತಿಸಬಹುದು. ಈ ಮೊದಲು 5 ಸಾವಿರ ರೂ. ಮಿತಿ ಇತ್ತು. ಯುಪಿಐ ಲೈಟ್ ನಲ್ಲಿನ ಪ್ರತಿಯೊಂದು ವಹಿವಾಟಿನ ಮಿತಿಯನ್ನು 500 ರೂ. ನಿಂದ 1000 ರೂ. ಗೆ ಹೆಚ್ಚಿಸಲಾಗಿದೆ. ಇದು ಫೀಚರ್ ಫೋನ್ ಬಳಸುವ ಹಿರಿಯ ನಾಗರಿಕರು ಆಗಿರಬಹದು ಅಥವಾ ಗ್ರಾಮೀಣರಿಗೆ ಅನುಕೂಲವಾಗಲಿದೆ.
ಇನ್ನು ಮುಂದೆ ವಲಸೇತರ ವೀಸಾ ಅರ್ಜಿದಾರರು ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೇ ,ತಮ್ಮ ಅಪಾಯಿಂಟ್ ಮೆಂಟ್ ಗಳನ್ನು ಮರು ನಿಗದಿ ಮಾಡುವ ಅವಕಾಶವನ್ನು ಭಾರತದಲ್ಲಿರುವ ಅಮೇರಿಕಾ ರಾಯಭಾರ ಕಚೇರಿ ನೀಡಿದೆ. ಆದ್ರೆ ಮತ್ತೊಮ್ಮೆ ಮರುನಿಗದಿ ಮಾಡಿದ್ರೆ ಅದಕ್ಕೆ ಮರುಅರ್ಜಿ ಹಾಗೂ ಹೆಚ್ಚುವರಿ ಶುಲ್ಕ ತೆರಬೇಕಾಗುತ್ತದೆ.
ಜಿಎಸ್ ಟಿ ಪೋರ್ಟಲ್ ಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸುವ ಉದ್ದೇಶದಿಂದ ಎಲ್ಲಾ ತೆರಿಗೆದಾರರಿಗೂ ಎಂಎಫ್ಎ ಯನ್ನು ಕಡ್ಡಾಯಗೊಳಿಸಲಾಗಿದೆ. ಅದ್ರಂತೆ ಇನ್ನು ಜಿಎಸ್ ಟಿ ಪೋರ್ಟಲ್ ಗೆ ಪ್ರವೇಶ ಪಡೆಯಬೇಕಂದ್ರೆ ಒಟಿಪಿ ನೀಡಬೇಕಾಗುತ್ತದೆ.
ಇನ್ನು ಎಚ್ ಎಫ್ ಸಿ ಮತ್ತು ಎನ್ ಬಿ ಎಫ್ ಸಿ ಗಳಿಗೆ ಆರ್ ಬಿ ಐ ನಿಗದಿಪಡಿಸಿರುವ ಪರಿಷ್ಕೃತ ನಿಬಂಧನೆಗಳು ಜನವರಿ 1 ರಿಂದ ಜಾರಿಯಾಗಲಿವೆ. ಆದ್ರಂತೆ ಠೇವಣಿದಾರರು ಠೇವಣಿ ಇಟ್ಟಿರುವ ಮೊತ್ತ 10 ಸಾವಿರ ರೂ. ಕಡಿಮೆಯಿದ್ರೆ, ಠೇವಣಿ ಇಟ್ಟ 3 ತಿಂಗಳೊಳಗಾಗಿ ಪೂರ್ಣ ಮೊತ್ತವನ್ನು ಯಾವುದೇ ಬಡ್ಡಿಯಿಲ್ಲದೆ ವಿತ್ ಡ್ರಾ ಮಾಡಬಹುದು. ಇನ್ನು ದೊಡ್ಡ ಮೊತ್ತದ ಠೇವಣಿ ಇಟ್ಟವ್ರು ಒಟ್ಟು ಮೊತ್ತದ ಶೇ. 50 ರಷ್ಟು ಅಥವಾ 5 ಲಕ್ಷ ರೂಗಳಷ್ಟು ಮೊತ್ತವನ್ನು ಠೇವಣಿಯಿಟ್ಟ 3 ತಿಂಗಳೊಳಗೆ ಯಾವುದೇ ಬಡ್ಡಿ ಇಲ್ಲದೇ ವಾಪಸ್ ಪಡೆಯಬಹುದಾಗಿದೆ. ಇನ್ನು ಠೇವಣಿದಾರ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ರೆ ಅಂತಹ ಸಂದರ್ಭದಲ್ಲಿ ಠೇವಣಿ ಎಷ್ಟೇ ಆಗಿದ್ರೂ ಸಂಪೂರ್ಣ ಮೊತ್ತವನ್ನು ಅಧಿಕಪೂರ್ಣವಾಗಿ ವಿತ್ ಡ್ರಾ ಮಾಡಬಹುದು. ಇನ್ನು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಠೇವಣಿ ಅವಧಿ ಪೂರ್ಣಗೊಳ್ಳುವ ಕನಿಷ್ಠ 2 ವಾರಗಳ ಮುಂಚಿತವಾಗಿಯೇ ಠೇವಣಿದಾರರಿಗೆ ಮೆಚ್ಯೂರಿಟಿ ವಿವರದ ಬಗ್ಗೆ ಮಾಹಿತಿ ನೀಡಬೇಕು.