ಬೆಂಗಳೂರು : ಬದುಕಿನಲ್ಲಿ ಛಲ, ಹಠ ಹಾಗೂ ಸಾಧನೆಯ ತುಡಿತ ಇರುವವರು ಎಷ್ಟೇ ಕಷ್ಟವಾದರೂ ಸರಿ, ತಾವು ಅಂದುಕೊಂಡದ್ದನ್ನು ದಕ್ಕಿಸಿಕೊಳ್ಳೋಕೆ ಯಾವುದೇ ರೀತಿಯ ಸಾಹಸವನ್ನು ಮಾಡುತ್ತಾರೆ. ತನಗೆ ಬೇಕಾದ ಏನೇ ಆಗಿರಲಿ ತನ್ನಿಂದ ದೂರವಾಗುತ್ತದೆ ಎನ್ನುವ ಸಂದರ್ಭಗಳಲ್ಲೂ ಅವರು ಯಾವುದೇ ಕಾರಣಕ್ಕೂ ವಿಚಲಿತರಾಗುವುದಿಲ್ಲ.
ಅಷ್ಟರ ಮಟ್ಟಿಗೆ ಅವರು ತಮ್ಮ ಕಸನು ಹಾಗೂ ಗುರಿಯ ಮೇಲೆ ಫೋಕಸ್ ಮಾಡಿರುತ್ತಾರೆ. ಹೀಗೆಯೇ ತಮಗೆ ಇರುವ ಎಷ್ಟೋ ಸಂಕಷ್ಟಗಳನ್ನೂ ಮೆಟ್ಟಿ, ಅಂಗ ವೈಕಲ್ಯವನ್ನೂ ಮೀರಿ ಇಂದು ರಾಜ್ಯಸಭೆಗೆ ಪ್ರವೇಶ ಪಡೆದಿರುವ ಕೇರಳದ ಸಮಾಜ ಸೇವಕ, ಶಿಕ್ಷಣ ತಜ್ಱ ಸದಾನಂದನ್ ಮಾಸ್ಟರ್ ಅವರ ಜೀವನವೇ ಒಂದು ರೋಚಕವಾಗಿದೆ.
ಇನ್ನೂ ಸದಾನಂದನ್ ಮಾಸ್ಟರ್ ತಮ್ಮ ಬದುಕಿನಲ್ಲಿ ಬಂದ ಅದೆಷ್ಟೋ ಕಷ್ಟಗಳನ್ನೂ ನುಂಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವುದೇ ನನ್ನ ಗುರಿ ಎಂದು ಸಾಗುತ್ತಿದ್ದಾರೆ. ಆದರೆ ಇದೀಗ ಇವರನ್ನು ಗುರುತಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ ಮುಖ್ಯವಾಗಿ ಖ್ಯಾತ ವಕೀಲರಾದ ಉಲ್ವಲ್ ನಿಕಮ್, ಮಾಜಿ ವಿದೇಶಾಂಗ ಸಚಿವ ಹರ್ಷವರ್ಧನ್ ಶ್ರಿಂಗ್ಲಾ, ಇತಿಹಾಸಗಾರ್ತಿ ಡಾ. ಮೀನಾಕ್ಷಿ ಜೈನ್ ಸದಾನಂದನ್ ಮಾಸ್ಟರ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ್ದಾರೆ. ಆದರೆ ಈ ಎಲ್ಲದರ ನಡುವೆಯೇ ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದಿರುವ ಸದಾನಂದನ್ ಮಾಸ್ಟರ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಸದ್ಯದ ತಮ್ಮ ಅಗಾಧವಾದ ಸಾಧನೆಯ ಮೂಲಕ ಭಾರತೀಯರ ಮನ ಮುಟ್ಟಿರುವ ಮಾಸ್ಟರ್ ಕೇರಳದ ಕಣ್ಣೂರು ಜಿಲ್ಲೆಯ ಕೂತುಪರಂಬಾದ ಪೆರಿಚೇರಿಯಲ್ಲಿ ಜನಿಸಿದ್ದಾರೆ. ಉತ್ತಮ ವಿದ್ಯಾವಂತರಾಗಿರುವ ಅವರು ಗೌವಾಹಟಿಯ ವಿವಿಯಿಂದ ಬಿಕಾ ಹಾಗೂ ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ ಬಿಎಡ್ ಪದವಿಯನ್ನು ಪಡೆದಿದ್ದಾರೆ. ಸದ್ಯ ಸದಾನಂದನ್ ಮಾಸ್ಟರ್ 1999ರಿಂದ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿರುವ ಶ್ರೀ ದುರ್ಗಾ ವಿಲಾಸಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿದ್ದಾರೆ.
ಇವರ ತಂದೆ ಕುಂಜಿರಾಮನ್ ನಂಬಿಯಾರ್ ಕೂಡ ಇದೇ ಶಿಕ್ಷಕ ವೃತ್ತಿಯಿಂದ ಬಂದವರಾಗಿದ್ದರು. ಜೊತೆಗೆ ನಂಬಿಯಾರ್ ಹಾಗೂ ಸದಾನಂದನ್ ಅವರ ಅಣ್ಣ ಸಿಪಿಐಎಂನ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದರು. ಆದರೆ ಇವುಗಳನ್ನು ಧಿಕ್ಕರಿಸಿ ಮಾಸ್ಟರ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಗುರುತಿಸಿಕೊಂಡಿದ್ದರು. ಕಳೆದ 1984ರಿಂದಲೂ ಅವರು ಆರ್‌ಎಸ್‌ಎಸ್ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.
ಬಳಿಕ ಕೇರಳ ಬಿಜೆಪಿಯಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿರುವ ಸದಾನಂದನ್ ಮಾಸ್ಟರ್ ಅವರು, 2016 ಮತ್ತು 2021ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ಕೂತುಪರಂಬಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಇನ್ನೂ ಆರ್ಎಸ್ಎಸ್ನಲ್ಲಿ ಸಕ್ರಿಯ ನಾಯಕರಾಗಿ ಕೆಲಸ ಮಾಡುತ್ತಿದ್ದ ಇವರ ಮೇಲೆ 1994ರ ಜನವರಿ ತಿಂಗಳ 25ರಂದು ರಾತ್ರಿ ಸಿಪಿಐಎಂನ ಕಾರ್ಯಕರ್ತರು ಸದಾನಂದನ್ ಮಾಸ್ಟರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡುತ್ತಾರೆ. ಅವರ ಎರಡೂ ಕಾಲುಗಳನ್ನು ಕತ್ತರಿಸಿ, ಅವುಗಳನ್ನು ಡಾಂಬರು ರಸ್ತೆಗೆ ಉಜ್ಜಿ ವಿಕೃತಿ ಮೆರೆದಿದ್ದರು ಎನ್ನುವ ಆರೋಪವೂ ಇದೆ. ಆದರೆ ಆಗ ರಕ್ತದ ಮಡುವಿನಲ್ಲಿದ್ದ ಮಾಸ್ಟರ್ಗೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು.
ಒಳ್ಳೆಯ ದಾರಿಯಲ್ಲಿ ಇರುವವರೆಗೆ ನೂರೆಂಟು ತೊಂದರೆಗಳು ಎಂದು ಭಾವಿಸಿ ಹಲ್ಲೆ, ಬೆದರಿಕೆಗಳಿಗೆ ಹೆದರದೆ, ಜಗ್ಗದೆ ಬಗ್ಗದೇ ಸದಾನಂದನ್ ಮಾಸ್ಟರ್ ತಮ್ಮ ಕಾರ್ಯವನ್ನು ಮುಂದುವರೆಸಿದ್ದರು. ಕೃತಕ ಕಾಲುಗಳನ್ನು ಅಳವಡಿಸಿಕೊಂಡು ಶಿಕ್ಷಕ ವೃತ್ತಿಗೆ ವಿಶೇಷ ಗೌರವ ತಂದುಕೊಡುತ್ತಾರೆ. ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಹಲವು ಹುದ್ದೆಗಳನ್ನು ನಿಬಾಯಿಸಿದ್ದಾರೆ. ದೇವರನಾಡು ಕೇರಳದಲ್ಲಿ ಆರ್‌ಎಸ್‌ಎಸ್ ಸಂಘಟನೆಯ ಜೊತೆಗೆ ಬಿಜೆಪಿಯನ್ನ ಸಂಘಟನಾತ್ಮಕವಾಗಿ ಬೆಳೆಸುವಲ್ಲಿ ಸದಾನಂದನ್ ಮಾಸ್ಟರ್ ಸಾಕಷ್ಟು ಶ್ರಮಿಸಿದ್ದಾರೆ. ಪದವಿ ಶಿಕ್ಷಣದ ನಂತರದಲ್ಲಿ ಅವರು ಆರ್‌ಎಸ್‌ಎಸ್‌ನ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದರು.
ಮುಖ್ಯವಾಗಿ ಆರ್‌ಎಸ್‌ಎಸ್ ವಿಚಾರಧಾರೆಗಳನ್ನು ಕೇರಳದಾದ್ಯಂತ ಪಸರಿಸುವತ್ತ ಮಹತ್ವದ ಕಾರ್ಯ ಮಾಡಿದ್ದಾರೆ. ಅವರು ರಾಷ್ಟ್ರೀಯ ಶಿಕ್ಷಕರ ಒಕ್ಕೂಟದ ಅಧ್ಯಕ್ಷರಾಗಿ, ಆರ್‌ಎಸ್‌ಎಸ್ ಚಿಂತಕರ ಚಾವಡಿಯಾದ ಭಾರತೀಯ ವಿಚಾರ ಕೇಂದ್ರದ ಸಕ್ರಿಯ ಸದಸ್ಯರೂ ಆಗಿದ್ದಾರೆ. 1994ರಲ್ಲಿ ತಮ್ಮ ಮೇಲೆ ದಾಳಿ ನಡೆಯುವ ವೇಳೆಯಲ್ಲಿಯೂ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೌದ್ದಿಕ್ ಪ್ರಮುಖ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಆದರೆ ಸಾಮಾಜಿಕ ಕಾರ್ಯಕ್ಕಾಗಿ ತಮ್ಮ ಇಡೀ ಬದುಕನ್ನೇ ಸವೆಸಿರುವ ನಿಜವಾದ ತ್ಯಾಗಿ ಸದಾನಂದನ್ ಮಾಸ್ಟರ್ ಅವರು ಈಗ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವುದು ನಿಜಕ್ಕೂ ಭಾರತೀಯರಿಗೆ ಹೆಮ್ಮೆಯ ವಿಚಾರವಾಗಿದೆ. ಇನ್ನೂ ಈ ನೇಮಕದ ಹಿಂದೆ ರಾಜಕೀಯ ಲೆಕ್ಕಾಚಾರಗಳೂ ಅಡಗಿವೆ. ಕೇರಳದಲ್ಲಿ ಬಿಜೆಪಿಗೆ ಮುಂದಿನ ದಿನಗಳಲ್ಲಿ ಲಾಭವಾಗುವ ನಿಟ್ಟಿನಲ್ಲಿಯೇ ಈ ಹೆಜ್ಜೆಯನ್ನು ಇಡಲಾಗಿದೆ. ಬಿಜೆಪಿಗೆ ಹೇಗೆ ಇದರಿಂದ ಅನುಕೂಲವಾಗಲಿದೆ ಎನ್ನುವುದನ್ನು ನೋಡುವುದಾದರೆ.
ಇನ್ನೂ ಪ್ರಮುಖವಾಗಿ ಸದಾನಂದನ್ ಮಾಸ್ಟರ್ ಅವರ ಕಾಲು ಕತ್ತರಿಸಿದ ಪ್ರಕರಣ ಕೇರಳ ಮಾತ್ರವಲ್ಲ ದೇಶದಾದ್ಯಂತ ಬಾರೀ ಸುದ್ದಿಯನ್ನು ಮಾಡಿತ್ತು. ತನ್ನ ಕಾಲು ಕಳೆದುಕೊಂಡಿದ್ದರೂ ಕೂಡ ಅವರು ಎದೆಗುಂದದೆ ಬದುಕಿದ್ದು ಬಿಜೆಪಿಗೆ ವರದಾನವಾಗಿತ್ತು. ಸದಾನಂದನ್ ಮಾಸ್ಟರ್ ಅವರ ಪ್ರೇರಣೆಯಿಂದಲೇ ಕೇರಳದಲ್ಲಿ ಸಾಕಷ್ಟು ಹಿಂದೂ ಕಾರ್ಯಕರ್ತರು ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕಾರ್ಯಕರ್ತರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಒಂದು ಸಾಮಾನ್ಯ ಶಾಲೆಯ ಶಿಕ್ಷಕನಿಗೆ ರಾಜ್ಯಸಭೆಯ ಸ್ಥಾನಮಾನ ಸಿಕ್ಕಿರೋದು ಕೇರಳದ ಬಿಜೆಪಿಗರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಮುಂದಿನ ಕೇರಳ ಚುನಾವಣೆಯಲ್ಲಿ ಸದಾನಂದನ್ ಮಾಸ್ಟರ್ ಅವರು ಚುನಾವಣೆಯ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದ್ದಾರೆ. ಮಾತ್ರವಲ್ಲ ಎಡರಂಗದ ಸರಕಾರದ ವಿರುದ್ದ ಕೇಳಿಬರುತ್ತಿರುವ ಆರೋಪಗಳು ಬಿಜೆಪಿಗೆ ವರದಾನ ಆಗುವ ಸಾಧ್ಯತೆಯೂ ಇದೆ.
ಅಲ್ಲದೆ ಸದಾನಂದ ಮಾಸ್ಟರ್ ಅವರ ತ್ಯಾಗ ಹಾಗೂ ಅವಿರತ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದಾರೆ. ಅವರು ರಾಜ್ಯಸಭೆಗೆ ಸದಾನಂದನ್ ಮಾಸ್ಟರ್ ಅವರು ನೇಮಕ ಆಗುತ್ತಲೇ ಗುಣಗಾನ ಮಾಡಿದ್ದಾರೆ. ಸದಾನಂದ ಮಾಸ್ಟರ್ ಅವರನ್ನು ಬಿಜೆಪಿ ಜೀವಂತ ಹುತಾತ್ಮ ಎಂದು ಕರೆಯುತ್ತಿದೆ. ಸದಾನಂದನ್ ಮಾಸ್ಟರ್ ಅವರ ನೇಮಕ ತ್ಯಾಗಕ್ಕೆ ಸಿಕ್ಕ ಗೌರವ, ಅವರ ಜೀವನವನ್ನು ಧೈರ್ಯ ಮತ್ತು ಅನ್ಯಾಯಕ್ಕೆ ಮಣಿಯದೇ ಇರುವ ಪ್ರತಿರೂಪ ಎಂದು ಮೋದಿ ಅವರು ಬಣ್ಣಿಸಿರುವುದು ಕೇರಳ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಬೂಸ್ಟರ್ ನೀಡಿದಂತಾಗಿದೆ.