ತುಮಕೂರು: ಕೈಯಲ್ಲಿ ಚಾಕುಗಳನ್ನು ಹಿಡಿದುಕೊಂಡು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿ ಮೊಬೈಲ್ ಹಾಗೂ ಸರ ದೋಚುತ್ತಿದ್ದ ಮೂವರನ್ನು ಬ್ಯಾತ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ಮೂವರು ಕಿಡಿಗೇಡಿಗಳ ತಂಡ ತುಮಕೂರು ನಗರದ ಭದ್ರಮ್ಮ ವೃತ್ತದ ಸಮೀಪದಲ್ಲಿರುವ ವಾಸನ್ ಐ ಕೇರ್ ಮುಂಭಾಗದ ಮೊಬೈಲ್ ಟೆಂಪರ್ ಗ್ಲಾಸ್ ಹಾಕುವ ಮಾರುತಿ ಕಾರಿನ ಬಳಿ ಬಂದು ಮೊಬೈಲ್ಗಳನ್ನು ಕಿತ್ತುಕೊಳ್ಳುವ ಯತ್ನ ಮಾಡಿದ್ದಾರೆ. ಮೊಬೈಲ್ ಕೊಡದೇ ಇದ್ದ ಕಾರಣಕ್ಕೆ ಮನಸ್ಸೋಇಚ್ಛೆ ಚಾಕುವಿನಿಂದ ೩-೪ ಜನರ ಮೇಲೆ ಹಲ್ಲೆಗೆಯತ್ನಿಸಿ ಓರ್ವನ ಹೊಟ್ಟೆಗೆ ತಿವಿದು ಅಲ್ಲಿಂದ ನಗರದ ಎಸ್.ಎಸ್ ಪುರಂ ಕಡೆಗೆ ಪರಾರಿಯಾದರು.
ನಂತರ ಸೋಮೇಶ್ವರ ಬಡಾವಣೆಯಲ್ಲಿ ಸ್ಕೋಡಾ ಕಾರಿನ ಗಾಜನ್ನು ಪುಡಿ ಪುಡಿ ಮಾಡಿ ಅದರಲ್ಲಿ ಕುಳಿತಿದ್ದ ಶಮಂತ್ ಎಂಬಾತನ ಬಳಿ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿ ಕಾರಿನಿಂದ ಆತನನ್ನು ಹೊರ ಎಳೆದು ಆತನ ಮೇಲೂ ಬಾಕುವಿನಿಂದ ಹಲ್ಲೆ ಮಾಡಿ ಆತನ ಕಿವಿಯ ಬಾಗವನ್ನು ಗಾಯಗೊಳಿಸಿ ಅಲ್ಲಿಂದ ಹಿರೇಹಳ್ಳಿ ಹತ್ತಿರದ ಬ್ಯಾತ ಎಂಬ ಗ್ರಾಮಾಂತರ ಭಾಗಕ್ಕೆ ಪರಾರಿಯಾದರು.
ಅಲ್ಲಿನ ಅದೇ ಗ್ರಾಮದ ಮಹಿಳೆಯ ಸರಗಳ್ಳತನಕ್ಕೆ ಮುಂದಾಗಿದ್ದು ಸರ ಕಿತ್ತು ಮಹಿಳೆಯ ಮೇಲೆ ಹಲ್ಲೆಗೆಯತ್ನಿಸಿದಾಗ ಅಲ್ಲಿ ಗ್ರಾಮಸ್ಥರು ಸೇರುತ್ತಿದ್ದಂತೆ ಪರಾರಿಯಾದರು ಆಗ ಗ್ರಾಮಸ್ಥರು ಈ ಮೂವರನ್ನು ಹಿಂಬಾಲಿಸಿ ಊರ್ಡಿಗೆರೆ ಸಮೀಪದಲ್ಲಿ ಈ ಮೂವರನ್ನು ಸೆರೆ ಹಿಡಿದು ಚೆನ್ನಾಗಿ ಥಳಿಸಿ ಕೈಕಾಲುಗಳನ್ನು ಕಟ್ಟಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇನ್ನು ಈ ಆರೋಪಿಗಳಿಂದ ಇರಿತಕ್ಕೆ ಒಳಗಾದವರನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬೈಕು,ಚಾಕು,ಮೊಬೈಲ್ ಹಾಗೂ ಸರವನ್ನು ವಶಪಡಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಕಾಂತರಾಜು, ಕರ್ನಾಟಕ ಟಿವಿ, ತುಮಕೂರು


