ಶಿವಮೊಗ್ಗ : ಜೆಡಿಎಸ್ ಪಕ್ಷದ ಸಂಘಟನೆಯ ಛಲ ಹೊತ್ತು ರಾಜ್ಯಾದ್ಯಂತ ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರವಾಸದಲ್ಲಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷದತ್ತ ಯುವ ಸಮೂಹವನ್ನು ಸೆಳೆಯುವುದರೊಂದಿಗೆ ಕಾರ್ಯಕರ್ತರ ನೋವು- ನಲಿವುಗಳಿಗೆ ಧ್ವನಿಯಾಗುತ್ತಿದ್ದಾರೆ.
ಈಗಾಗಲೇ ನಿಖಿಲ್ ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ತಮ್ಮ ಭೇಟಿಯನ್ನು ಯಶಸ್ವಿಯಾಗಿಸಿದ್ದಾರೆ. ಅಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ, ಸರ್ಕಾರದ ಬೇಜವಾಬ್ದಾರಿ ನಡೆಯನ್ನು ಖಂಡಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಆರಂಭಿಸಿರುವ ಜನರೊಂದಿಗೆ ಜನತಾದಳ ವಿಶೇಷ ಸದಸ್ಯತ್ವ ಅಭಿಯಾನವು ಶಿವಮೊಗ್ಗ ತಲುಪಿದೆ. ಅಲ್ಲಿಯೂ ಸದಸ್ಯತ್ವ ಅಭಿಯಾನಕ್ಕೆ ನಿಖಿಲ್ ಚಾಲನೆ ನೀಡಿ ರಾಜ್ಯ ಸರ್ಕಾರದ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಭ್ರಷ್ಟರ ಭರ್ಜರಿ ಬೇಟೆ KGಗಟ್ಟಲೇ ಚಿನ್ನ, ದುಡ್ಡು : ಭ್ರಷ್ಟ ಅಧಿಕಾರಿಗಳಿಗೆ ಲೋಕಾ ಬಿಗ್ ಶಾಕ್!
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲಾಗಿದೆಯೇ? ಎನ್ನುವುದಕ್ಕೆ ಸರ್ಕಾರ ಉತ್ತರಿಸಬೇಕು. ಕೇವಲ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ಮೇಲೆ ಗದಾಪ್ರಹಾರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರಾಜ್ಯದಲ್ಲಿ ಸೇವಿಸುವ ಗಾಳಿಯೊಂದನ್ನು ಬಿಟ್ಟು ಪ್ರತಿಯೊಂದಕ್ಕೂ ಸರ್ಕಾರ ತೆರಿಗೆ ವಿಧಿಸುತ್ತಿದೆ. ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ತೆರಿಗೆ ಭಾರವನ್ನು ಹೊರಿಸುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ನಿಖಿಲ್ ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿಯವರು ಕೇಂದ್ರಕ್ಕೆ ಹೋಗಬೇಕೆಂದು ಅವರ ಮನಸ್ಸಲ್ಲಿ, ಅಥವಾ ಕಾರ್ಯಕರ್ತರ ಮನಸ್ಸಿನಲ್ಲಿಯೂ ಇರಲಿಲ್ಲ. ವಿಧಾನಸಭಾ ಕಲಾಪದಲ್ಲಿ ಅವರು ಇದ್ದಿದ್ದರೆ ಯಾವ ರೀತಿಯಾಗಿ ತೊಡೆ ತಟ್ಟಿ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದರು ಎಂಬುವುದನ್ನು ನೋಡಿದ್ದೇವೆ. ಹೀಗಾಗಿ ಸದನದಲ್ಲಿ ಅವರನ್ನು ಬಹಳಷ್ಟು ಜನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಾವೆಲ್ಲರೂ ಸೇರಿ ಮುಂದೆ ಅವರನ್ನು ರಾಜ್ಯದ ಸಿಎಂ ಮಾಡಬೇಕಿದೆ ಎಂದು ನಿಖಿಲ್ ಕುಮಾರಸ್ವಾಮಿ ಕರೆ ನೀಡಿದ್ದಾರೆ.