ರಾಜ್ಯದ ಹಲವೆಡೆ ಭಾರೀ ಮಳೆ ಮತ್ತು ಪ್ರವಾಹ ಸಂಭವಿಸಿದೆ. ಇದರಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ರೈತರಿಗೆ ಬೆಂಬಲ ಸೂಚಿಸುತ್ತೆ. ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲು ರಾಜ್ಯವ್ಯಾಪಿ ಪ್ರವಾಸ ಕೈಗೊಳ್ಳಲಿದ್ದೇವೆ ಎಂದು JDS ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಮಳೆಹಾನಿಯಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ತ್ವರಿತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರ 6,800 ರೂಪಾಯಿ ಪ್ರತಿ ಹೆಕ್ಟೇರ್ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಆದ್ರೆ ರೈತರು ಅದನ್ನು ತೃಪ್ತಿದಾಯಕವೆಂದು ಕಾಣುತ್ತಿಲ್ಲ. ಪ್ರತಿ ಹೆಕ್ಟೇರ್‌ಗೆ ಕನಿಷ್ಠ ₹20,000 – ₹25,000 ಪರಿಹಾರ ನೀಡಬೇಕು ಎಂದು ಒತ್ತಡ ಹಾಕಿದರು.
ನಿಖಿಲ್ ಕುಮಾರಸ್ವಾಮಿ ಅವರು ಮುಂದಿನ ದಿನಗಳಲ್ಲಿ ಬೆಳೆ ಹಾನಿ, ಮನೆ ಕುಸಿತ ಹಾಗೂ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ಕೊಡಲಿದ್ದಾರೆ. ಅಲ್ಲಿನ ವಾಸ್ತವಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ, ರಾಜ್ಯ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಲಿದ್ದಾರೆ. ಮಳೆಯ ಪರಿಣಾಮವಾಗಿ ಕೃಷಿ ನಾಶವಾಗಿದೆ. ಆದ್ರೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ಸಚಿವರು ನೆರೆಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡದಿರುವುದನ್ನು ನಿಖಿಲ್ ಅವರು ತೀವ್ರವಾಗಿ ಟೀಕಿಸಿದರು.
ಎಚ್.ಡಿ. ಕುಮಾರಸ್ವಾಮಿ ಅವರ ಕಾಲದಲ್ಲಿ ರೈತರ ಸಾಲ ಮನ್ನಾ ಮಾಡಲಾಗಿತ್ತು ಎಂಬುದನ್ನು ನಿಖಿಲ್ ಅವರು ನೆನಪಿಸಿದರು. ಈ ಬಾರಿ ಸುಮಾರು 1.42 ಲಕ್ಷ ಹೆಕ್ಟೇರ್ ಭೂಮಿ ಮಳೆಯಿಂದ ನಾಶವಾಗಿದೆ. ಈ ಹಿನ್ನಲೆಯಲ್ಲಿ ರೈತರ ಸಾಲ ಮನ್ನಾ ತ್ವರಿತವಾಗಿ ಜಾರಿಗೆ ಬರಬೇಕು.
ಉತ್ತರ ಕರ್ನಾಟಕದಲ್ಲಿ ಶೇ.70ರಷ್ಟು ಬೆಳೆ ಹಾನಿಯಾಗಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ರಸಗೊಬ್ಬರ ಕೊರತೆಯಿಂದ, ರೈತರು ಮಾರುಕಟ್ಟೆಯಲ್ಲಿ ಪ್ರತಿ ಚೀಲಕ್ಕೆ ₹1000-₹1200 ರೂಪಾಯಿಗೆ ಖರೀದಿಸುವಂತಾಗಿದೆ. ಸರ್ಕಾರಿ ಬೆಲೆ ₹266 ಇರುವಾಗ ಈ ರೀತಿ ರೈತರ ಮೇಲೆ ಆರ್ಥಿಕ ಹೊರೆ ಹಾಕಲಾಗಿದೆ. ಈ ಸಮಸ್ಯೆಗೆ ಹೊಣೆ ಯಾರು? ಅಂತ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ