Monday, November 17, 2025

Latest Posts

ಬಿಹಾರಕ್ಕೆ ಮತ್ತೆ ನಿತೀಶ್ CM? ಅಮಿತ್ ಶಾ ಕೊಟ್ರು ಸುಳಿವು

- Advertisement -

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ನಾಯಕತ್ವದಲ್ಲಿ ಎದುರಿಸಲಾಗುವುದು ಎಂದು ಖಚಿತಪಡಿಸಿದ್ದಾರೆ.

ಖಾಸಗಿ ವಾಹಿನಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅಮಿತ್ ಶಾ ಮಾತನಾಡಿದ್ದಾರೆ. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಮುಖ್ಯಮಂತ್ರಿ ಅಭ್ಯರ್ಥಿಯ ಕುರಿತು ನಿರ್ಧಾರವನ್ನು ಚುನಾವಣೆಯ ನಂತರ ಕೈಗೊಳ್ಳಲಿವೆ ಎಂದು ಹೇಳಿದರು. ನವೆಂಬರ್‌ 14 ರಂದು ಫಲಿತಾಂಶ ಪ್ರಕಟವಾದಾಗ ಎನ್‌ಡಿಎ ಮೈತ್ರಿಕೂಟವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.

ನಿತೀಶ್‌ ಕುಮಾರ್‌ ಅವರು ಮುಂದುವರೆದು ಮುಖ್ಯಮಂತ್ರಿಯಾಗುತ್ತಾರೆಯೇ ಇಲ್ಲವೇ ಎಂಬುದನ್ನು ನಿರ್ಧರಿಸುವವರು ನಾನು ಅಲ್ಲ. ಈ ಕ್ಷಣ ನಾವು ನಿತೀಶ್‌ ಅವರ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತಿದ್ದೇವೆ. ಫಲಿತಾಂಶದ ಬಳಿಕ ಎಲ್ಲ ಮಿತ್ರಪಕ್ಷಗಳು ಒಟ್ಟಾಗಿ ಕೂಡಿ ತಮ್ಮ ನಾಯಕರ ಕುರಿತು ತೀರ್ಮಾನ ಕೈಗೊಳ್ಳುತ್ತವೆ ಎಂದು ಶಾ ಹೇಳಿದರು. 2020ರ ಚುನಾವಣೆಯ ನಂತರ ನಿತೀಶ್‌ ಕುಮಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿ, ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದಿದ್ದರೂ ಸಹ, ಮುಖ್ಯಮಂತ್ರಿಯಾಗಿ ನಿತೀಶ್‌ ಅವರನ್ನು ಮುಂದುವರಿಸಲು ಪಕ್ಷ ನಿರ್ಧರಿಸಿತ್ತು ಎಂದು ಅವರು ಬಹಿರಂಗಪಡಿಸಿದರು. ನಾವು ಯಾವಾಗಲೂ ಮೈತ್ರಿಕೂಟದ ಧರ್ಮವನ್ನು ಕಾಪಾಡಿದ್ದೇವೆ. ನಿತೀಶ್‌ ಅವರ ಹಿರಿಯತೆ ಮತ್ತು ಅವರು ಗಳಿಸಿದ ಗೌರವದ ಆಧಾರದ ಮೇಲೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು ಎಂದರು.

ನಿತೀಶ್‌ ಕುಮಾರ್‌ ಅವರ ಪಕ್ಷ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಮಿತ್‌ ಶಾ, ಅವರು ಕಾಂಗ್ರೆಸ್‌ ಜೊತೆ ಕೇವಲ ಎರಡು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಕಾಲ ಮಾತ್ರ ಇದ್ದರು ಎಂದು ಹೇಳಿದರು. ಅವರ ರಾಜಕೀಯ ಬದುಕು ಕಾಂಗ್ರೆಸ್‌ ವಿರೋಧದಿಂದಲೇ ಆರಂಭವಾಯಿತು. 1974ರಲ್ಲಿ ಜೆಪಿ ಆಂದೋಲನದಿಂದ ಆರಂಭವಾದ ಈ ಹೋರಾಟ, ನಂತರ ಇಂದಿರಾ ಗಾಂಧಿ ವಿರುದ್ಧ ದೇಶವ್ಯಾಪಿ ಚಳುವಳಿಯಾಗಿ ಬೆಳೆದು ತುರ್ತು ಪರಿಸ್ಥಿತಿಗೆ ಕಾರಣವಾಯಿತು ಎಂದು ಅವರು ನೆನಪಿಸಿದರು.

ಇದೇ ಸಂದರ್ಭದಲ್ಲಿ ಅಮಿತ್‌ ಶಾ ಮಹಾಘಟಬಂಧನ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಲಾಲು ಪ್ರಸಾದ್‌ ಯಾದವ್‌ ಅವರ ಆಡಳಿತವನ್ನು ಕಂಡಿರುವ ಬಿಹಾರದ ಜನತೆ ಮತ್ತೆ ಆ ದಿನಗಳು ಮರಳಿ ಬರುವುದನ್ನು ಬಯಸುವುದಿಲ್ಲ ಎಂದು ಹೇಳಿದರು. ಕಾಂಗ್ರೆಸ್‌ ಪಕ್ಷದ ಕುರಿತು ವ್ಯಂಗ್ಯವಾಡಿದ ಅವರು, ಸಣ್ಣ ಮಿತ್ರಪಕ್ಷಗಳನ್ನು ಯಾವಾಗಲೂ ಕಡೆಗಣಿಸಿರುವುದು ಕಾಂಗ್ರೆಸ್‌ನ ಅಭ್ಯಾಸ. ಇತರರನ್ನು ಚಿಕ್ಕದಾಗಿ ನೋಡುತ್ತಾ, ತಾನೇ ಚಿಕ್ಕದಾಗಿಹೋಗಿದೆ. ಇದೇ ಅಹಂಕಾರದಿಂದ ಕಾಂಗ್ರೆಸ್‌ ಬಿಹಾರದಿಂದ ಬಂಗಾಳದವರೆಗೆ ತನ್ನ ನೆಲೆಯನ್ನೇ ಕಳೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss