ರಾಜ್ಯ ಸರ್ಕಾರದ ವಿರುದ್ಧ ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಬೆಳೆ ಖರೀದಿಸಲು ಸರ್ಕಾರಕ್ಕೆ ಹಣವಿಲ್ಲ. ಆದರೆ ಶಾಸಕರನ್ನು ಖರೀದಿಸಲು ಕೋಟಿ ಕೋಟಿ ರೂಪಾಯಿ ಇದೆ ಎಂದು ಟೀಕಿಸಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶೆಟ್ಟರ್, ಒಬ್ಬೊಬ್ಬ ಶಾಸಕನಿಗೆ 50–60 ಕೋಟಿ ರೂಪಾಯಿ ಕೊಡಲಾಗುತ್ತಿದೆ ಎಂಬ ಮಾಹಿತಿ ಬರುತ್ತಿದೆ. ಮುಂದೆ ಇನ್ನೂ ನೀಡಲಾಗುವುದು ಎಂದು ಹೇಳಿ ಶಾಸಕರನ್ನು ಖರೀದಿ ಮಾಡುತ್ತಿರುವುದು ದುರಂತ. ಶಾಸಕರಿಗೆ ‘ಖರೀದಿ ಕೇಂದ್ರ’ ತೆರೆದ ಸರ್ಕಾರ, ರೈತರ ಬೆಳೆ ಖರೀದಿಸಲು ಮಾತ್ರ ಕೇಂದ್ರ ತೆರೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಸಮಸ್ಯೆಗಳನ್ನು ಕಡೆಗಣಿಸಿರುವ ಸರ್ಕಾರದ ಕಾರ್ಯಪದ್ಧತಿಯನ್ನು ಶೆಟ್ಟರ್ ಪ್ರಶ್ನಿಸಿದ್ದಾರೆ. ರೈತರ ಬೆಳೆ ಖರೀದಿಸಲು ಹಣವಿಲ್ಲ ಎಂದು ಹೇಳುವ ಸರ್ಕಾರ, ಶಾಸಕರನ್ನು ಖರೀದಿಸಲು ಮಾತ್ರ ಕೋಟಿ ಕೋಟಿ ಹಣವನ್ನು ಖರ್ಚು ಮಾಡುತ್ತದೆ. ಒಬ್ಬರು ಕುರ್ಚಿ ಉಳಿಸಿಕೊಳ್ಳಲು, ಇನ್ನೊಬ್ಬರು ಕುರ್ಚಿ ಪಡೆಯಲು ಎರಡೂ ಕಡೆಯಿಂದ ಖರೀದಿ ನಡೆಯುತ್ತಿದೆ.
ಇದರಲ್ಲಿ ಕಾಂಗ್ರೆಸ್ ಶಾಸಕರು ಮಾತ್ರ ‘ಲಕ್ಕಿ ಪರ್ಸನ್’. ಕಾಂಗ್ರೆಸ್ ಶಾಸಕರು ಉದ್ದಾರ ಆಗುತ್ತಿದ್ದಾರೆ. ಇದರಿಂದ ರಾಜ್ಯಕ್ಕೆ ನಷ್ಟವಾಗುತ್ತಿದೆ. ರಾಜ್ಯದ ಜನ ಸಾಮಾನ್ಯರ, ರೈತರ ಸಮಸ್ಯೆ ಕೇಳಲಾರದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ ಎಂದರು.
ಸರ್ಕಾರ ಜನವಿರೋಧಿ ಹಾಗೂ ರೈತವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ ಶೆಟ್ಟರ್, ಈ ಸರ್ಕಾರ ರಾಜ್ಯದಿಂದ ಹೋಗಲೇಬೇಕು. ಇದಕ್ಕಾಗಿ ಬಿಜೆಪಿ ನವೆಂಬರ್ 27 ಮತ್ತು 28ರಂದು ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ. ರೈತರು ಹಾಗೂ ಸಾಮಾನ್ಯರ ಸಮಸ್ಯೆಗಳ ನಿರ್ಲಕ್ಷ್ಯವನ್ನು ನಾವು ಪ್ರಶ್ನಿಸುತ್ತೇವೆ ಎಂದು ಘೋಷಿಸಿದರು.
ವರದಿ : ಲಾವಣ್ಯ ಅನಿಗೋಳ

