ಕಾಲಾ ಬದಲಾದಂತೆ ಪೊಲೀಸರು ಬದಲಾಗುತ್ತಿದ್ದಾರೆ. ಯಾಕಂದ್ರೆ ಹ್ಯಾಪಿಯಸ್ಟ್ ಹೆಲ್ತ್ ಸಂಸ್ಥೆ ಹಾಗೂ ನಗರ ಪೊಲೀಸ್ ಇಲಾಖೆ ಸಹಯೋಗದಲ್ಲಿ ಪೊಲೀಸರ ಆರೋಗ್ಯ ತಪಾಸಣೆಗಾಗಿ ಆರಂಭಿಸಿರುವ ಪ್ರಾಜೆಕ್ಟ್ ಖುಷಿ ಯೋಜನೆಗೆ ನಗರ ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ಬಹಳಷ್ಟು ಅನುಕೂಲವಾಗಿದೆ. ಅಲ್ಲದೆ, ಈ ಯೋಜನೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಶೇ 60 ರಷ್ಟು ಅಧಿಕಾರಿ-ಸಿಬ್ಬಂದಿ ರಮ್ಮ ತೂಕವನ್ನು ಇಳಿಸಿಕೊಂಡಿದ್ದಾರೆ.
ಇನ್ನು ಈ ಯೋಜನೆಯನ್ನು ಶಾಶ್ವತವಾಗಿ ಮುಂದುವರಿಸಲು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಚಿಂತಿಸಿದ್ದಾರೆ. ಕಳೆದ ಸೆ.11ರಂದು ಪ್ರಾಜೆಕ್ಟ್ ಖುಷಿ ಯೋಜನೆ ಆರಂಭಿಸಲಾಗಿತ್ತು. 3 ತಿಂಗಳ ಮೊದಲ ಹಂತದ ಅವಧಿ ಪೂರ್ಣಗೊಂಡಿದ್ದು, ಈ ಯೋಜನೆಯಲ್ಲಿ ಭಾಗಿಯಾದವರು 0.5 ಕೆ.ಜಿ.ಯಿಂದ 6.1 ಕೆ.ಜಿ.ಯಷ್ಟು ತೂಕ ಇಳಿಸಿಕೊಂಡಿದ್ದಾರೆ. ಶೇ.61ರಷ್ಟು ಮಂದಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಿಕೊಂಡಿದ್ದಾರೆ.
ಈ ಬೆನ್ನಲ್ಲೇ ಇತ್ತೀಚೆಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಯೋಜನೆ ಸಮಾರೋಪ ಸಮಾರಂಭ ನಡೆಯಿತು. ಈ ವೇಳೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್‌ಸಿಂಗ್, ದೀರ್ಘಾವಧಿ ಕೆಲಸ, ಅಧಿಕ ಒತ್ತಡದ ವಾತಾವರಣ, ಅನಿಯಮಿತ ದಿನಚರಿ ಮತ್ತು ನಿದ್ರೆಯ ವೇಳಾಪಟ್ಟಿಯಲ್ಲಿ ವ್ಯತ್ಯಾಸ ಉಂಟಾಗಿ ಸಿಬ್ಬಂದಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಇದು ಸಿಬ್ಬಂದಿಯ ವೈಯಕ್ತಿಕ ಆರೋಗ್ಯ ಮತ್ತು ಕ್ಷೇಮದ ಮೇಲೆ ಪರಿಣಾಮ ಬೀರುತ್ತಿತ್ತು. ಸಿಬ್ಬಂದಿ – ಕ್ಷೇಮಕ್ಕಾಗಿ ಹ್ಯಾಪಿಯಸ್ಟ್ ಹೆಲ್ತ್ ಸಹಯೋಗದಲ್ಲಿ ‘ಪ್ರಾಜೆಕ್ಟ್ ಖುಷಿ’ ಯೋಜನೆ ಜಾರಿ ಮಾಡಲಾಗಿತ್ತು. ಇದರಿಂದ ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ಪ್ರಯೋಜನವಾಗಿದೆ ಎಂದರು. ಅಲ್ಲದೆ, ಈ ಯೋಜನೆಯನ್ನು ಶಾಶ್ವತವಾಗಿ ಜಾರಿಗೆ ತರಲು ಕ್ರಮ ತೆಗೆದು ಕೊಳ್ಳಲಾಗುವುದು. ಈ ಕುರಿತು ಹ್ಯಾಪಿಯಸ್ಟ್ ಹೆಲ್ತ್ ಸಂಸ್ಥೆಯ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




