ಪ್ರಖ್ಯಾತ ಹಾಸನಾಂಬೆ ಉತ್ಸವಕ್ಕೆ ದಿನಗಣನೆ ಶುರುವಾಗಿದೆ. ಈ ವರ್ಷ ಅಕ್ಟೋಬರ್ 9ರಿಂದ 23ರವರೆಗೆ ಉತ್ಸವ ನಡೀತಿದೆ. ಮೊದಲ ಹಾಗೂ ಕೊನೆ ದಿನ ಹೊರತುಪಡಿಸಿ, ಉಳಿದ 13 ದಿನಗಳ ಕಾಲ ಭಕ್ತರಿಗೆ, ಹಾಸನಾಂಬೆ ದರ್ಶನ ನೀಡಲಿದ್ದಾರೆ.
ಆದರೆ ಈ ಬಾರಿ ದರ್ಶನದ ಪಾಸ್ ವ್ಯವಸ್ಥೆಯನ್ನು, ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಬದಲಾಗಿ ಗೋಲ್ಡ್ ಕಾರ್ಡ್ ನೀಡಲಾಗ್ತಿದೆ. 1 ಗೋಲ್ಡ್ ಕಾರ್ಡಿಗೆ ಒಬ್ಬರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಹಾಸನಾಂಬೆ ಉತ್ಸವ ವಿಚಾರವಾಗಿ, ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ, ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ನೇತೃತ್ವದಲ್ಲಿ, ಸಿದ್ಧತಾ ಸಭೆ ನಡೆಸಲಾಯ್ತು. ಶಾಸಕರಾದ ಅರಸೀಕೆರೆ ಕ್ಷೇತ್ರದ ಕೆ.ಎಂ. ಶಿವಲಿಂಗೇಗೌಡ, ಹಾಸನ ಕ್ಷೇತ್ರದ ಸ್ವರೂಪ್, ಸಕಲೇಶಪುರ ಕ್ಷೇತ್ರದ ಸಿಮೆಂಟ್ ಮಂಜು ಮತ್ತು ಹಾಸನಾಂಬೆ ದೇವಾಲಯದ ಆಡಳಿತ ಮಂಡಳಿ ಅಧಿಕಾರಿಗಳೂ ಭಾಗಿಯಾಗಿದ್ರು.
ಉಚಿತ ಪಾಸ್ ಪಡೆದು ದರ್ಶನಕ್ಕೆ ಬರುತ್ತಿದ್ದ ಜನರಿಂದ ಗೊಂದಲವಾಗುತ್ತಿತ್ತು. ಹೀಗಾಗಿ ಸಿಎಂ, ಡಿಸಿಎಂ, ಸಿಜೆ ಹೊರತುಪಡಿಸಿ, ಉಳಿದ ಎಲ್ಲಾ ಗಣ್ಯರಿಗೆ ವೈಯಕ್ತಿಕ ಶಿಷ್ಟಾಚಾರ ಬದಲು, ಜಿಲ್ಲಾಡಳಿತ ನಿಯೋಜಿತ ವಾಹನ ಬಳಕೆ ಮಾಡಲಾಗುವುದು. ಕೊನೆಯ 5 ದಿನ ಎಲ್ಲಾ ರೀತಿಯ ಶಿಷ್ಟಾಚಾರ ರದ್ದು ಮಾಡಲಾಗಿದೆ ಅಂತಾ, ಆಡಳಿತ ಮಂಡಳಿ ಅಧಿಕಾರಿ ಮಾರುತಿ ಮಾಹಿತಿ ನೀಡಿದ್ರು.
ಇನ್ನು, ಸಭೆಯಲ್ಲಿ ಮಾತನಾಡಿದ ಕೃಷ್ಣ ಬೈರೇಗೌಡ, ರಾಜ್ಯದ ಮೂಲೆ ಮೂಲೆಯಿಂದ ಜನರು ಬರುತ್ತಾರೆ. ಆದರೆ ವಿವಿಐಪಿ, ವಿಐಪಿ ಭಕ್ತರ ಕಾರಣದಿಂದ, ಜನರಿಗೆ ಸಮಸ್ಯೆ ಆಗುತ್ತದೆ. ಅವರನ್ನು ಗಂಟೆಗಟ್ಟಲೇ ನಿಲ್ಲಿಸಿ ತೊಂದರೆ ಕೊಡುವುದು ಸರಿಯಲ್ಲ. ಈ ಗಣ್ಯ ಸಂಸ್ಕೃತಿ ತಡೆಯಲು ಸಹಕರಿಸಿ.
ನಾನು ಈ ವಿಐಪಿ ಹಾಗೂ ಶಿಷ್ಟಾಚಾರ ಭಕ್ತರಿಗೆ ಸಮಯ ನಿಗದಿ ಮಾಡಿ ಎಂದು ಹೇಳಿದ್ದೆ. ಗೋಲ್ಡ್ ಕಾರ್ಡ್ಗೆ 2 ಗಂಟೆ, ಶಿಷ್ಟಾಚಾರಕ್ಕೆ 2 ಗಂಟೆ ಮಾತ್ರ ಸಮಯ ನಿಗದಿ ಮಾಡಿ ಎಂದು ಸಲಹೆ ನೀಡಲಾಗಿದೆ. ಇದನ್ನೆಲ್ಲಾ ಮಾಡಿದರೆ ಜನರಿಗೆ ಅನುಕೂಲ ಆಗುತ್ತೆ ಎನ್ನುವುದಾದರೆ, ಎಲ್ಲಾ ರೀತಿಯ ಬದಲಾವಣೆ ಮಾಡೋಣ ಅಂತಾ ಹೇಳಿದ್ರು.




