ಪಾಕಿಸ್ತಾನ ಜಿಂದಾಬಾದ್ ಎಂದ ದೇಶದ್ರೋಹಿಗಳಿಗೆ ಶಿಕ್ಷೆ ಇಲ್ಲ!

‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿ ವಿವಾದ ಸೃಷ್ಟಿಸಿದವರ ವಿರುದ್ಧ ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿರುವ ಯಾವುದೇ ಪ್ರಕರಣದಲ್ಲೂ ಇದುವರೆಗೆ ಶಿಕ್ಷೆ ಆಗಿಲ್ಲ ಎಂಬ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ರಾಜ್ಯ ಗೃಹ ಇಲಾಖೆಯೇ ಬಿಡುಗಡೆ ಮಾಡಿದ ಅಧಿಕೃತ ಅಂಕಿಅಂಶಗಳ ಪ್ರಕಾರ, 2023ರಿಂದ 2026ರವರೆಗೆ ಕರ್ನಾಟಕದಲ್ಲಿ ಒಟ್ಟು 17 ಪ್ರಕರಣಗಳು ದಾಖಲಾಗಿದ್ದು, ಒಂದೇ ಒಂದು ಕೇಸ್‌ನಲ್ಲೂ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿಲ್ಲ.

ಈ ವಿಚಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಡಿ.ಎಸ್. ಅರುಣ್ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಜಿ. ಪರಮೇಶ್ವರ ಅವರು ಈ ಮಾಹಿತಿ ನೀಡಿದ್ದಾರೆ. ಗೃಹ ಸಚಿವರ ಹೇಳಿಕೆಯಂತೆ, ದಾಖಲಾಗಿರುವ ಹಲವು ಪ್ರಕರಣಗಳು ಇನ್ನೂ ತನಿಖಾ ಹಂತದಲ್ಲಿದ್ದು, ಕೆಲವು ನ್ಯಾಯಾಲಯದಲ್ಲಿವೆ. ಇನ್ನು ಕೆಲವು ಪ್ರಕರಣಗಳಲ್ಲಿ ಪೊಲೀಸರು ‘ಬಿ ರಿಪೋರ್ಟ್’ ಸಲ್ಲಿಸಿದ್ದಾರೆ.

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಪ್ರಕರಣಗಳು 2023 ರಲ್ಲಿ 3 ಪ್ರಕರಣ, 2024 ರಲ್ಲಿ 8 ಪ್ರಕರಣ, 2025 ರಲ್ಲಿ 6 ಪ್ರಕರಣ ಒಟ್ಟು 17 ಪ್ರಕರಣಗಳು ದಾಖಲಾಗಿದೆ. ಬಾಂಗ್ಲಾದೇಶ ಜಿಂದಾಬಾದ್ ಪ್ರಕರಣ 2026 ರಲ್ಲಿ 1 ಪ್ರಕರಣ ದಾಖಲಾಗಿದೆ.

ಮೂರು ವರ್ಷಗಳ ಅವಧಿಯಲ್ಲಿ ದೇಶ ವಿರೋಧಿ ಘೋಷಣೆ ಸಂಬಂಧಿತ ಪ್ರಕರಣಗಳು ದಾಖಲಾಗಿದ್ದರೂ, ಯಾವುದೇ ಪ್ರಕರಣದಲ್ಲೂ ಶಿಕ್ಷೆ ಆಗದಿರುವುದು ಪೊಲೀಸ್ ತನಿಖೆ ಹಾಗೂ ಕಾನೂನು ಪ್ರಕ್ರಿಯೆಗಳ ಪರಿಣಾಮಕಾರಿತ್ವದ ಕುರಿತು ಪ್ರಶ್ನೆಗಳನ್ನು ಎತ್ತಿದೆ.

ವರದಿ : ಲಾವಣ್ಯ ಅನಿಗೋಳ

About The Author