ಬೆಂಗಳೂರಿನ ಸೌಲಭ್ಯಗಳ ಬಗ್ಗೆ ಅಸಮಾಧಾನವಿದ್ದರೆ ಕಂಪನಿಗಳು ಸ್ಥಳಾಂತರಗೊಳ್ಳಲು ಸ್ವತಂತ್ರರಾಗಿದ್ದಾರೆ. ಆದರೆ ಸರ್ಕಾರಕ್ಕೆ ಬೆದರಿಕೆ ಹಾಕಲು ಯಾರಿಗೂ ಅವಕಾಶವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರೀಯ ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, ನಗರದ ಮೂಲಸೌಕರ್ಯಗಳನ್ನು ಸರಿಪಡಿಸಲು ಸರ್ಕಾರ ಬದ್ಧವಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಲು ನವೆಂಬರ್ ಗಡುವು ನಿಗದಿ ಮಾಡಲಾಗಿದೆ. ಬೆಂಗಳೂರಿನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ನಿರಂತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಉದ್ಯಮಿಗಳ ಬೆಂಗಳೂರಿನಿಂದ ಹೊರಡುವ ಕುರಿತು ನಡೆದ ಚರ್ಚೆಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನಿಂದ ಹೊರಟುಹೋಗುವುದಕ್ಕೆ ಸರ್ಕಾರ ಯಾರನ್ನೂ ತಡೆಯುವುದಿಲ್ಲ. ಆದರೆ ಸರ್ಕಾರವನ್ನು ಬೆದರಿಸಲು, ಬ್ಲ್ಯಾಕ್ಮೇಲ್ ಮಾಡಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಲಭ್ಯವಿರುವ ಸೌಲಭ್ಯಗಳು ಹಾಗೂ ಪ್ರತಿಭೆ ಇನ್ನೆಲ್ಲಿ ಸಿಗುವುದಿಲ್ಲ. ನಮ್ಮ ಬದ್ಧತೆ ರಾಜ್ಯದ ಜನತೆಗೆ ಸೇವೆ ಸಲ್ಲಿಸುವುದಾಗಿದೆ ಎಂದರು.
ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಡಿಕೆಶಿ ಮಾಹಿತಿ ನೀಡಿ, ಬೆಂಗಳೂರು ಇತಿಹಾಸದಲ್ಲೇ ಮೊದಲ ಬಾರಿಗೆ 112 ಕಿ.ಮೀ. ಉದ್ದದ ಫ್ಲೈಓವರ್ಗಳು ಹಾಗೂ 44 ಕಿ.ಮೀ. ಡಬಲ್ ಡೆಕ್ಕರ್ ರಸ್ತೆಗಳ ನಿರ್ಮಾಣ ಕಾರ್ಯಗಳು ಸಾಗುತ್ತಿವೆ. ಶೀಘ್ರದಲ್ಲೇ ಇವು ಪೂರ್ಣಗೊಳ್ಳಲಿವೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು, ಪ್ರತಿದಿನ ನೂರಾರು ಕಂಪನಿಗಳು ನಗರಕ್ಕೆ ಬರುತ್ತಿವೆ ಎಂದು ಹೇಳಿದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ



